ADVERTISEMENT

ವಿಭಜನೆಯ ಮಾತುಗಳನ್ನು ಸಹಿಸಿಕೊಳ್ಳುವುದಿಲ್ಲ: DKSಗೆ ಖರ್ಗೆ ಪರೋಕ್ಷ ಎಚ್ಚರಿಕೆ

ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ, ‘ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರ ಬೇಡಿಕೆ’ ಎಂಬ ಹೇಳಿಕೆ ಇಂದು ರಾಜ್ಯಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಪಿಟಿಐ
Published 2 ಫೆಬ್ರುವರಿ 2024, 10:47 IST
Last Updated 2 ಫೆಬ್ರುವರಿ 2024, 10:47 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ನವದೆಹಲಿ: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ, ‘ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರ ಬೇಡಿಕೆ’ ಎಂಬ ಹೇಳಿಕೆ ಇಂದು ರಾಜ್ಯಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಡಿ.ಕೆ.ಸುರೇಶ್ ಹೆಸರು ಹೇಳದೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು, ಕಾಂಗ್ರೆಸ್‌ನಲ್ಲಿ ವಿಭಜಕ ಶಕ್ತಿಗಳು ಇನ್ನೂ ಜೀವಂತವಾಗಿವೆ ಎನ್ನುವುದಕ್ಕೆ ಈ ಹೇಳಿಕೆ ನಿದರ್ಶನ ಎಂದರು.

ADVERTISEMENT

ದೇಶದ ಸಂವಿಧಾನದ ಅಡಿ ಚುನಾಯಿತನಾದ ಒಬ್ಬ ಸಂಸದ ದೇಶದ ಸಾರ್ವಭೌಮತೆಯನ್ನು ರಕ್ಷಿಸುತ್ತೇನೆ ಎಂದು ಎಲ್ಲರ ಎದುರು ಪ್ರಮಾಣವಚನ ಸ್ವೀಕರಿಸಿರುತ್ತಾರೆ. ಇಂತಹ ಹೇಳಿಕೆಗಳನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಇದು ಸಂವಿಧಾನದ ಮೇಲಿನ ನೇರ ದಾಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಮಧ್ಯಪ್ರವೇಶಿಸಿದ ಸಭಾಪತಿ ಜಗದೀಪ್ ಧನಕರ್ ಅವರು, ಇದು ಲೋಕಸಭೆ ಸದಸ್ಯ ಮಾತನಾಡಿರುವ ವಿಷಯ ಆಗಿರುವುದರಿಂದ ಇಲ್ಲಿ ಚರ್ಚೆ ಬೇಡ ಎಂದು ತಡೆ ನೀಡಿದರು.

ನಂತರ ಧನಕರ್ ಮಾತಿಗೆ ಸಹಮತ ವ್ಯಕ್ತಪಡಿಸಿ ಮಾತನಾಡಿದ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ‘ಡಿ.ಕೆ. ಸುರೇಶ್ ಹೇಳಿಕೆ ಬಗೆಗಿನ ಚರ್ಚೆ ಇಲ್ಲಿ ಅಪ್ರಸ್ತುತ. ಅದಾಗ್ಯೂ ನಮ್ಮ ಕಾಂಗ್ರೆಸ್ ಪಕ್ಷ ದೇಶ ವಿಭಜನೆಯ ಮಾತುಗಳನ್ನು ಸಹಿಸಿಕೊಳ್ಳುವುದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಭಾರತ ಒಂದು. ಈ ವಿಚಾರವನ್ನು ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ಪರಾಮರ್ಶಿಸುವುದು ಸೂಕ್ತ’ ಎಂದು ಚರ್ಚೆಗೆ ತೆರೆ ಎಳೆದರು.

‘ದಕ್ಷಿಣ ರಾಜ್ಯಗಳಿಂದ ಸಂಗ್ರಹಿಸಿದ ಹಣವನ್ನು ಉತ್ತರದ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ನಾವು ನ್ಯಾಯಯುತವಾದ ಪಾಲನ್ನು ಕೇಳುತ್ತಿದ್ದೇವೆ. ನಮಗೆ ಅನ್ಯಾಯ ಮಾಡುವ ಮೂಲಕ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಹಿಂದಿ ಭಾಗದವರು ಹೇರುತ್ತಿದ್ದಾರೆ’ ಎಂದು ಡಿ.ಕೆ ಸುರೇಶ್ ಹೇಳಿದ್ದರು.

ಈ ಬಗ್ಗೆ ಗುರುವಾರ ರಾತ್ರಿ ಸ್ಪಷ್ಟನೆ ನೀಡಿದ್ದ ಸುರೇಶ್‌, ‘ವಿವಾದ ಸೃಷ್ಟಿಸಲು ಬಿಜೆಪಿಯವರು ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ’ ಎಂದು ದೂರಿದರು. ‘ಕರ್ನಾಟಕವು ಭಾರತದ ಭಾಗವಾಗಿಯೇ ಇರುತ್ತದೆ. ನಮ್ಮದು ಒಕ್ಕೂಟ ವ್ಯವಸ್ಥೆ. ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿರುವುದನ್ನು ಹೇಳಿದ್ದೇನೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.