ಪಟ್ನಾ: ನೂತನ ಮಹಾಮೈತ್ರಿ ಕೂಟದ ಸರ್ಕಾರವು ವಿಧಾನಸಭೆ ಸ್ಪೀಕರ್, ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದೆ ಎಂದು ಹಿರಿಯ ಜೆಡಿಯು ನಾಯಕ ಹೇಳಿದ್ದಾರೆ.
ಹಲವು ಶಾಸಕರು ಸಹಿ ಹಾಕಿರುವ ಅವಿಶ್ವಾಸ ಗೊತ್ತುವಳಿ ಅರ್ಜಿಯನ್ನು ವಿಧಾನಸಭೆ ಕಾರ್ಯದರ್ಶಿಗೆ ಹಸ್ತಾಂತರಿಸಲಾಗಿದೆ.
ಎಂಟನೇ ಬಾರಿ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಹೊರಡಿಸಲುಮಹಾಮೈತ್ರಿ ಕೂಟ ಮುಂದಾಗಿದೆ.
ನಿತೀಶ್ ಕುಮಾರ್ ಅವರು ವಿಶ್ವಾಸ ಮತ ಸಾಬೀತು ಪಡಿಸಿದ ನಂತರ ಸ್ಪೀಕರ್ ಸಿನ್ಹಾ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗುವುದು ಎಂದು ಜೆಡಿಯು ಹಿರಿಯ ಮುಖಂಡ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.
ಆಗಸ್ಟ್ 24 ಅಥವಾ 25ರಂದು ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ನಡೆಯುವ ಸಂಭವವಿದೆ.
ನಿಯಮದ ಪ್ರಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ ಬಳಿಕ ಸ್ಪೀಕರ್ ಅವರನ್ನು ನಿವೃತ್ತಿಗೊಳಿಸುವ ನಿರ್ಣಯವನ್ನು ಕೈಗೊಳ್ಳಬಹುದು ಎಂದು ಚೌಧರಿ ಹೇಳಿದ್ದಾರೆ.
ಮಹಾಮೈತ್ರಿ ಸರ್ಕಾರದ ಪರ ಒಟ್ಟು 164 ಶಾಸಕರು ಇದ್ದಾರೆ. ಬಿಜೆಪಿಗೆ 77 ಶಾಸಕರ ಬಲವಿದೆ.
'ಸ್ಪೀಕರ್ ಉದ್ದೇಶ ಅನುಮಾನಾಸ್ಪದವಾಗಿದೆ. ಸರ್ಕಾರ ಬದಲಾದ ಮೇಲೆ ಸಂಪ್ರದಾಯದಂತೆ ಹುದ್ದೆಯಿಂದ ಕೆಳಗಿಳಿಯಲು ನಿರಾಕರಿಸುತ್ತಿದ್ದಾರೆ' ಎಂದು ಮತ್ತೊಬ್ಬ ಜೆಡಿಯು ನಾಯಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.