ತಿರುವನಂತಪುರ: ತಾಯಿ ಸಾವಿನಿಂದಾಗಿ ಶಿಕ್ಷಣ ಮೊಟಕುಗೊಳಿಸಿ, ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಆಕೆ ತಮ್ಮ 105ನೇ ವಯಸ್ಸಿನಲ್ಲಿ ನಾಲ್ಕನೇ ತರಗತಿಯ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಕೊಲ್ಲಂನ ಭಾಗೀರಥಿ ಅಮ್ಮ, ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ರಾಷ್ಟ್ರದ ಅತ್ಯಂತ ಹಿರಿಯ ವಯಸ್ಸಿನ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇರಳ ಸಾಕ್ಷರತಾ ಮಿಷನ್ ಕಳೆದ ವರ್ಷ ಈ ಪರೀಕ್ಷೆ ನಡೆಸಿತ್ತು. ಅದರ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.
ತಾಯಿ ಸಾವಿನಿಂದಾಗಿ ಆಕೆಯ ವಿದ್ಯಾಭ್ಯಾಸದಕನಸು ನನಸಾಗಿರಲಿಲ್ಲ. ಮೂರನೇ ತರಗತಿಗೇ ಅವರು ಶಿಕ್ಷಣ ಮೊಟಕುಗೊಳಿಸಿದ್ದರು.ಜೊತೆಗೆ, 30ನೇ ವಯಸ್ಸಿನಲ್ಲೇ ವಿಧವೆಯಾದ ಭಾಗೀರಥಿ ಅಮ್ಮನ ಮೇಲೆ ಆರು ಮಕ್ಕಳ ಜವಾಬ್ದಾರಿಯೂ ಬಿದ್ದಿತ್ತು.
ವಯಸ್ಸಾದ ಕಾರಣ ಅವರಿಗೆ ಬರೆಯಲು ಕಷ್ಟವಾಗುತ್ತಿತ್ತು. ಪರಿಸರ, ಗಣಿತ ಹಾಗೂ ಮಲಯಾಳಂ ಪ್ರಶ್ನೆಪತ್ರಿಕೆ ಪೂರ್ಣಗೊಳಿಸಲು ಅವರು ಮೂರು ದಿನ ತೆಗೆದುಕೊಂಡರು. ಗಣಿತದಲ್ಲಿ ನೂರಕ್ಕೆ ನೂರು ಅಂಕ ಹಾಗೂ ಒಟ್ಟಾರೆ 275 ಅಂಕಗಳ ಪೈಕಿ 205 ಅಂಕ ಪಡೆದುಕೊಂಡಿದ್ದಾರೆ.
12 ಮೊಮ್ಮಕ್ಕಳನ್ನು ಹೊಂದಿರುವ ಭಾಗೀರಥಿ ಅಮ್ಮ,10ನೇ ತರಗತಿಗೆ ತತ್ಸಮಾನವಾದ ಪರೀಕ್ಷೆ ಬರೆಯುವ ಉತ್ಸುಕತೆಯನ್ನೂ ತೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.