ಮುಂಬೈ : ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಆರೋಪಿ, ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವೂರ್ ರಾಣಾನ ಗಡೀಪಾರಿಗೆ ಅಮೆರಿಕ ನ್ಯಾಯಾಲಯ ಒಪ್ಪಿಗೆ ಸೂಚಿಸಿರುವುದು ಭಾರತಕ್ಕೆ ದೊರೆತ ಬಹುದೊಡ್ಡ ಯಶಸ್ಸು ಎಂದು ಈ ಪ್ರಕರಣದ ವಿಶೇಷ ಸರ್ಕಾರಿ ವಕೀಲ ಉಜ್ವಲ್ ನಿಕ್ಕಂ ಅಭಿಪ್ರಾಯಪಟ್ಟಿದ್ದಾರೆ.
‘ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ನಾನು ಲಷ್ಕರ್–ಎ–ತೊಯಿಬಾ ಸಂಘಟನೆಗೆ ಸೇರಿದ ಉಗ್ರ ಡೇವಿಡ್ ಹೆಡ್ಲಿಯನ್ನು ವಿಚಾರಿಸಿದ್ದ ವೇಳೆ ತಹವೂರ್ ರಾಣಾನ ಪಾತ್ರದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದ. ಉಗ್ರರಿಗೆ ಸಂಚಾರದ ಸೌಲಭ್ಯ ಒದಗಿಸಿದ್ದಲ್ಲದೆ, ಪಾಕಿಸ್ತಾನ ಸೇನೆಯೊಂದಿಗೆ ಆತ ನಿರಂತರ ಸಂಪರ್ಕದಲ್ಲಿದ್ದ. ಅಮೆರಿಕದ ನ್ಯಾಯಾಲಯ ಇದೆಲ್ಲವನ್ನೂ ಪರಿಗಣಿಸಿ ಆತನ ಗಡೀಪಾರಿಗೆ ಒಪ್ಪಿಗೆ ನೀಡಿದೆ’ ಎಂದು ನಿಕ್ಕಂ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದ ಪಾತ್ರ ಸಾಬೀತಾಗಲಿದೆ : ಫಡಣವೀಸ್
ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನದ ಪಾತ್ರ ಇದೆ ಎಂಬ ಭಾರತದ ಆರೋಪವು ಗಡೀಪಾರು ಮೂಲಕ ಭಾರತಕ್ಕೆ ಬರಲಿರುವ ರಾಣಾನ ತನಿಖೆಯ ಮೂಲಕ ಮತ್ತೊಮ್ಮೆ ದೃಢಪಡಲಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.