ನವದೆಹಲಿ: ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಸ್ವಾಗತಿಸಿದ್ದು, ಇದು ಪಾರದರ್ಶಕತೆಗೆ ಸಂದ ಜಯ ಎಂದಿದ್ದಾರೆ.
ಚುನಾವಣಾ ಬಾಂಡ್‌ಗಳನ್ನು ಅಸಾಂವಿಧಾನಿಕ ಎಂದು ಕರೆದಿರುವ ಸುಪ್ರೀಂ ಕೋರ್ಟ್, ಯೋಜನೆಯು ಸಂವಿಧಾನ ಪರಿಚ್ಛೇದ 19(1)(ಎ) ಅಡಿಯಲ್ಲಿ ಬರುವ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದಿದೆ. ಚುನಾವಣಾ ಬಾಂಡ್‌ಗಳ ಕುರಿತ ಎಲ್ಲ ವಿವರಗಳನ್ನು ಮಾರ್ಚ್ 13ರೊಳಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದೂ ಸೂಚಿಸಿದೆ.
ಈ ಕುರಿತಂತೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಚಿದಂಬರಂ, ’ ಈ ತೀರ್ಪು ಪಾರದರ್ಶಕತೆ, ಚುನಾವಣಾ ವಿಷಯದಲ್ಲಿ ಎಲ್ಲವನ್ನು ಮುಕ್ತವಾಗಿ ತಿಳಿದುಕೊಳ್ಳುವ ಹಕ್ಕನ್ನು ಎತ್ತಿಹಿಡಿದಿದೆ. ಅಕ್ರಮ ಚುನಾವಣಾ ಬಾಂಡ್ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುವ ಎಲ್ಲ ವಾದವನ್ನು ಇದು ಅಳಿಸಿ ಹಾಕಿದೆ’ ಎಂದರು.
‘ನಿಜ ಹೇಳಬೇಕೆಂದರೆ ಎಲ್ಲ ನಿಯಮಗಳನ್ನು ಮೂಲೆ ಗುಂಪು ಮಾಡಿ ಕಾರ್ಪೊರೇಟ್‌ಗಳು ಮತ್ತು ಉದ್ಯಮಿಗಳಿಂದ ಶೇ. 90ರಷ್ಟು ದೇಣಿಗೆಯನ್ನು ಸಂಗ್ರಹಿಸುತ್ತಿದ್ದ ಬಿಜೆಪಿಗೆ ಈ ತೀರ್ಪು ನುಂಗಲಾರದ ತುತ್ತಾಗಿದೆ’ ಎಂದು ಹೇಳಿದರು.
‘ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಸೇರಿದಂತೆ ಪ್ರಜಾಪ್ರಭುತ್ವದ ಪ್ರತಿಯೊಂದು ತತ್ವವನ್ನು ಉಲ್ಲಂಘಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.