ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಹಾಗೂ ಮತದಾನ ದೃಢೀಕರಣ ರಸೀದಿ ಯಂತ್ರಗಳ (ವಿವಿ–ಪ್ಯಾಟ್) ವಿಶ್ವಾಸಾರ್ಹತೆಯ ವಿಚಾರವಾಗಿ ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡದ ಕೇಂದ್ರ ಚುನಾವಣಾ ಆಯೋಗದ ನಡೆ ಬಗ್ಗೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇವಿಎಂ ಹಾಗೂ ವಿವಿ–ಪ್ಯಾಟ್‌ಗಳ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆಗಳನ್ನು ಎತ್ತಿ ಹಲವಾರು ಮಂದಿ ಪ್ರಾಜ್ಞರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯ ಕುರಿತಾಗಿ ಕೈಗೊಂಡ ಕ್ರಮಗಳು ಏನು ಎಂದು ಆರ್‌ಟಿಐ ಅಡಿ ಪ್ರಶ್ನಿಸಲಾಗಿತ್ತು.
ಉತ್ತರವನ್ನು ಒದಗಿಸದೆ ಇರುವ ಚುನಾವಣಾ ಆಯೋಗದ ಕ್ರಮವು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಸಿಐಸಿ ಹೇಳಿದೆ. ಈ ಬಗ್ಗೆ ಲಿಖಿತ ರೂಪದಲ್ಲಿ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸಿಐಸಿ ಸೂಚಿಸಿದೆ.
ಇವಿಎಂ, ವಿವಿ–ಪ್ಯಾಟ್ ಹಾಗೂ ಮತ ಎಣಿಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆ ಕುರಿತು ಮನವಿ ಸಲ್ಲಿಸಿದ್ದ ಪ್ರಾಜ್ಞರ ಪೈಕಿ ಒಬ್ಬರಾದ ಮಾಜಿ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಂ ಅವರು, ಆ ಮನವಿ ಕುರಿತು ಕೈಗೊಂಡ ಕ್ರಮ ಏನು ಎಂಬುದರ ವಿವರ ನೀಡುವಂತೆ ಆಯೋಗಕ್ಕೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.
ಆಯೋಗಕ್ಕೆ ಮನವಿಯನ್ನು 2022ರ ಮೇ 2ರಂದು ಸಲ್ಲಿಸಲಾಗಿತ್ತು. ಆರ್‌ಟಿಐ ಅಡಿ ಮಾಹಿತಿ ಕೋರಿ 2022ರ ನವೆಂಬರ್ 22ರಂದು ಅರ್ಜಿ ಸಲ್ಲಿಸಲಾಗಿತ್ತು. ಮನವಿಯನ್ನು ಯಾವ ಅಧಿಕಾರಿಗಳಿಗೆ ರವಾನಿಸಲಾಗಿದೆ, ಅದಕ್ಕೆ ಸಂಬಂಧಿಸಿದಂತೆ ಸಭೆಗಳು ನಡೆದಿವೆಯೇ, ಆ ಸಭೆಯ ವಿವರಗಳು ಬೇಕು ಎಂದು ಆರ್‌ಟಿಐ ಮೂಲಕ ಮಾಹಿತಿ ಕೋರಲಾಗಿತ್ತು.
ಮೂವತ್ತು ದಿನಗಳಲ್ಲಿ ಚುನಾವಣಾ ಆಯೋಗದಿಂದ ಯಾವುದೇ ಉತ್ತರ ಸಿಗದಿದ್ದಾಗ ದೇವಸಹಾಯಂ ಅವರು ಮೊದಲ ಮೇಲ್ಮನವಿ ಸಲ್ಲಿಸಿದರು. ಅದು ಪ್ರಯೋಜನಕ್ಕೆ ಬರಲಿಲ್ಲ. ಮುಖ್ಯ ಮಾಹಿತಿ ಆಯುಕ್ತರಿಗೆ ಅವರು ಎರಡನೆಯ ಮೇಲ್ಮನವಿ ಸಲ್ಲಿಸಿದರು.
ದೇವಸಹಾಯಂ ಅವರಿಗೆ ಉತ್ತರ ಒದಗಿಸದೆ ಇದ್ದುದಕ್ಕೆ ಕಾರಣ ಏನು ಎಂದು ಮುಖ್ಯ ಮಾಹಿತಿ ಆಯುಕ್ತ ಹೀರಾಲಾಲ್ ಸಾಮರಿಯಾ ಅವರು ಕೇಳಿದಾಗ, ಚುನಾವಣಾ ಆಯೋಗದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ತೃಪ್ತಿಕರ ಉತ್ತರ ಒದಗಿಸಲಿಲ್ಲ.
‘ಆರ್‌ಟಿಐ ಕಾಯ್ದೆಯು ವಿಧಿಸಿರುವ ಕಾಲಮಿತಿಯಲ್ಲಿ ಅಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿಯು (ಪಿಐಒ) ಮಾಹಿತಿ ಒದಗಿಸದೆ ಇದ್ದುದಕ್ಕೆ ಮಾಹಿತಿ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದೆ’ ಎಂದು ಸಾಮರಿಯಾ ಅವರು ಹೇಳಿದ್ದಾರೆ.
ಲೋಪಕ್ಕೆ ಇತರರೂ ಕಾರಣರಾಗಿದ್ದರೆ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು, ಮಾಹಿತಿ ಆಯೋಗದ ಆದೇಶದ ಪ್ರತಿಯನ್ನು ಅವರಿಗೂ ತಲುಪಿಸಬೇಕು. ಅವರಿಂದ ಲಿಖಿತ ಉತ್ತರ ಪಡೆದು ಮಾಹಿತಿ ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ಮೂವತ್ತು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದ್ದಾರೆ.
ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ), ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳ (ಐಐಎಂ) ಕೆಲವು ಪ್ರಾಧ್ಯಾಪಕರು, ನಾಗರಿಕ ಸೇವೆಗಳಲ್ಲಿ ಇದ್ದ ಕೆಲವು ಅಧಿಕಾರಿಗಳು ಇವಿಎಂ, ವಿವಿ–ಪ್ಯಾಟ್ ಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.