ನವದೆಹಲಿ: ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್, ಬಾಲಾಕೋಟ್ ವೈಮಾನಿಕ ದಾಳಿಯ ಹೀರೋ ಅಭಿನಂದನ್ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ‘ವೀರಚಕ್ರ’ ಪ್ರದಾನ ಮಾಡಿದರು.
ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನ್ ಅವರಿಗೆ ‘ವೀರಚಕ್ರ’ ಪ್ರದಾನ ಮಾಡಲಾಯಿತು.
ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಅವರು 2019ರ ಫೆಬ್ರುವರಿ 27ರಂದು ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್–16 ಯುದ್ಧ ವಿಮಾನಗಳನ್ನು ಮಿಗ್–21 ಯುದ್ಧ ವಿಮಾನದ ಮೂಲಕ ಬೆನ್ನಟ್ಟಿ ಹೋಗಿ ಹೊಡೆದುರುಳಿಸಿದ್ದರು. ಬಳಿಕ ಮಿಗ್–21 ಯುದ್ಧ ವಿಮಾನ ಪತನಗೊಂಡಿದ್ದರಿಂದ ಪಾಕಿಸ್ತಾನಕ್ಕೆ ಸೆರೆ ಸಿಕ್ಕಿದ್ದರು. ಭಾರತ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಮಾರ್ಚ್ 1ರ ರಾತ್ರಿ ಪಾಕಿಸ್ತಾನ ಬಿಡುಗಡೆ ಮಾಡಿತ್ತು.
ಬಾಲಾಕೋಟ್ ದಾಳಿಯ ಸಂದರ್ಭದಲ್ಲಿ ಪ್ರದರ್ಶಿಸಿದ ಸಾಹಸಕ್ಕಾಗಿ ಅಭಿನಂದನ್ ಅವರಿಗೆ ಈ ಹಿಂದೆಯೇ ಶೌರ್ಯಚಕ್ರ ನೀಡಿ ಗೌರವಿಸಲಾಗಿದೆ.
ಇತ್ತೀಚೆಗಷ್ಟೇ ಅವರಿಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.