ADVERTISEMENT

ಪ್ರಾಣ ಪಣಕ್ಕಿಟ್ಟು ಯುದ್ಧವಿಮಾನ ರಕ್ಷಿಸಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 20:26 IST
Last Updated 8 ಡಿಸೆಂಬರ್ 2021, 20:26 IST
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್   

ನವದೆಹಲಿ: ಭಾರತೀಯ ವಾಯುಪಡೆಯ ಅನುಭವಿ ಪೈಲಟ್‌ ಎನಿಸಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಎಂಐ17ವಿ5 ಕಾಪ್ಟರ್ ದುರಂತದಲ್ಲಿ ಬದುಕುಳಿದಿದ್ದು, ತಮಿಳುನಾಡಿನ ವೆಲ್ಲಿಂಗ್‌ಟನ್ ಸೇನಾ ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ.

2020ರಲ್ಲಿ, ಲಘು ಯುದ್ಧವಿಮಾನ (ಎಲ್‌ಸಿಎ) ತೇಜಸ್‌ ತಾಂತ್ರಿಕ ವೈಫಲ್ಯದಿಂದ ಪತನವಾಗುವ ಅಪಾಯವಿದ್ದಾಗಲೂ, ತಮ್ಮ ಪ್ರಾಣವನ್ನು ಲೆಕ್ಕಿಸದೆ ಅದನ್ನು ರಕ್ಷಿಸಿದ್ದ ವರುಣ್ ಸಿಂಗ್ ಅವರಿಗೆ ಸ್ವಾತಂತ್ರ್ಯೋತ್ಸವದಲ್ಲಿ ಶೌರ್ಯಚಕ್ರ ನೀಡಲಾಗಿತ್ತು.

ವರುಣ್ ಸಿಂಗ್ ಅವರು ಎಲ್‌ಸಿಎ ಸ್ಕಾಡ್ರನ್‌ನಲ್ಲಿ ಪೈಲಟ್ ಆಗಿದ್ದರು. ಯುದ್ಧವಿಮಾನದಲ್ಲಿ ಕಾಣಿಸಿದ್ದ ತಾಂತ್ರಿಕ ದೋಷವ‌ನ್ನು ಸರಿಪಡಿಸಿದ ಬಳಿಕ, ಅದನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸುವ ಹೊಣೆಯನ್ನು ವರುಣ್ ಹೊತ್ತಿದ್ದರು. ಅತ್ಯಂತ ಎತ್ತರದ ಪ್ರದೇಶದಲ್ಲಿವಿಮಾನ ನಿಯಂತ್ರಣ ವ್ಯವಸ್ಥೆ ಮತ್ತು ವಿಮಾನದೊಳಗಿನ ಗಾಳಿಯ ಒತ್ತಡ ವ್ಯವಸ್ಥೆಯನ್ನು ಅವರು ಪರೀಕ್ಷಿಸಬೇಕಿತ್ತು.

ADVERTISEMENT

ಅತ್ಯಂತ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನದಲ್ಲಿ ಮತ್ತೆ ತಾಂತ್ರಿಕ ದೋಷ ಇರುವುದನ್ನು ಅವರು ಪತ್ತೆಹಚ್ಚಿದರು. ತಕ್ಷಣ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಅವರು ಮುಂದಾದರು. ವಿಮಾನವನ್ನು ಇಳಿಸುವಾಗ ವಿಮಾನ ನಿಯಂತ್ರಣ ವ್ಯವಸ್ಥೆ ಕೈಕೊಟ್ಟಿತು. ಪೈಲಟ್‌ಗೆ ವಿಮಾನದ ಮೇಲಿದ್ದ ನಿಯಂತ್ರಣ ಸಂಪೂರ್ಣವಾಗಿ ಕೈತಪ್ಪಿತು. ಇದು ದೊಡ್ಡ ದುರಂತ ಉಂಟಾಗುವ ಸೂಚನೆಯಾಗಿತ್ತು.

ಲ್ಯಾಂಡಿಂಗ್‌ ಮಾಡಲು ಯತ್ನಿಸಿದಾಗ, ನಿಯಂತ್ರಣಕ್ಕೆ ಸಿಗದೇ ವಿಮಾನವು ರಭಸದಿಂದ ನೆಲದತ್ತ ಬೀಳಲಾರಂಭಿಸಿತು. ಇದು ಜೀವಕ್ಕೆ ತೀವ್ರ ಅಪಾಯ ತಂದೊಡ್ಡುವ ಪರಿಸ್ಥಿತಿ. ದೈಹಿಕ ಹಾಗೂ ಮಾನಸಿಕ ಬಲವನ್ನು ಕುಗ್ಗಿಸುವ ಈ ಸ್ಥಿತಿಯನ್ನು ಹತೋಟಿಗೆ ತಂದ ವರುಣ್ ಸಿಂಗ್, ತಮ್ಮ ಚಾಲನಾ ಕೌಶಲಗಳನ್ನು ಬಳಸಿ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

ವಿಮಾನವು ಚಾಲನಾ ನಿಯಂತ್ರಣ ತಪ್ಪಿದಾಗ, ಅದರಿಂದ ಹೊರಬಂದು ಜೀವ ಉಳಿಸಿಕೊಳ್ಳುವ ಆಯ್ಕೆಯು ಪೈಲಟ್‌ಗೆ ಇರುತ್ತದೆ. ಆದರೆ ವರುಣ್ ಸಿಂಗ್ ಅವರು ತಮ್ಮ ಜೀವಕ್ಕೆ ಇದ್ದ ಅಪಾಯವನ್ನು ಲೆಕ್ಕಿಸದೆ ವಿಮಾನವನ್ನು ಉಳಿಸಿಕೊಂಡಿದ್ದರು. ಆಗಬಹುದಾಗಿದ್ದ ದೊಡ್ಡ ಹಾನಿಯನ್ನು ತಪ್ಪಿಸಿದ್ದ ಅವರಿಗೆ ಶೌರ್ಯಚಕ್ರ ನೀಡಿ ಗೌರವಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.