ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದಿರುವ ಹಲ್ಲೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್, ‘ಆ ದೇಶ ಈಗ ಜಿಹಾದಿಸ್ತಾನವಾಗಿ ಮಾರ್ಪಟ್ಟಿದ್ದು, ಮದರಸಾಗಳು ಮೂಲಭೂತವಾದಿಗಳನ್ನು ಹುಟ್ಟುಹಾಕುವ ತಾಣಗಳಾಗಿವೆ‘ ಎಂದು ಟೀಕಿಸಿದ್ದಾರೆ.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಬೌದ್ಧರು ‘ಮೂರನೇ ದರ್ಜೆಯ ನಾಗರಿಕರಾಗುತ್ತಿದ್ದು, ಅಲ್ಲಿ ಬೆಳೆಯುತ್ತಿರುವ ಹಿಂದೂ ವಿರೋಧಿ ಮನಸ್ಥಿತಿ ತೀವ್ರ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲಿನ ದಾಳಿ ಹಾಗೂ ದುರ್ಗಾ ಪೂಜಾ ಮಂದಿರಗಳ ನಾಶಕ್ಕೆ ಬಾಂಗ್ಲಾದೇಶ ಸಾಕ್ಷಿಯಾಗುತ್ತಿದೆ. ಕಳೆದ ವಾರ ಕೋಮಿಲ್ಲಾದ ದುರ್ಗಾ ಪೂಜಾ ಸ್ಥಳದಲ್ಲಿ ಹಿಂದೂಗಳನ್ನು ಅವಮಾನಿಸಿದ ಕಾರಣದಿಂದ ನಡೆದ ಅಹಿತಕರ ಘಟನೆಯಿಂದಾಗಿ ಕೋಮುಗಳ ನಡುವೆ ಉದ್ವಿಗ್ನತೆ ಉಂಟಾಗಿತ್ತು, ಇದು ಅನೇಕ ಜಿಲ್ಲೆಗಳಲ್ಲಿ ಘರ್ಷಣೆಗೂ ಕಾರಣವಾಗಿತ್ತು.
ಈ ದಾಳಿಯನ್ನು ಖಂಡಿಸಿದ ತಸ್ಲಿಮಾ, ‘ನಾನು ಇನ್ನು ಮುಂದೆ ಆ ದೇಶವನ್ನು ಬಾಂಗ್ಲಾದೇಶ ಎಂದು ಕರೆಯಲು ಇಚ್ಛಿಸುವುದಿಲ್ಲ. ಅದು ಈಗ ‘ಜಿಹಾದಿಸ್ತಾನ್‘ ಆಗಿ ಮಾರ್ಪಟ್ಟಿದೆ. ಅಲ್ಲಿ ಸರ್ಕಾರ ಧರ್ಮವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸುತ್ತಿದೆ. ಅವರು ಇಸ್ಲಾಂ ಧರ್ಮವನ್ನು ರಾಜ್ಯ ಧರ್ಮವನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಅಲ್ಲಿ ಹಿಂದೂಗಳು ಮತ್ತು ಬೌದ್ಧರು ಮೂರನೇ ದರ್ಜೆಯ ಪ್ರಜೆಗಳಾಗಿದ್ದಾರೆ ಮತ್ತು ಇಂಥ ಕಿರುಕುಳಗಳಿಗೆ ಒಳಗಾಗುತ್ತಿದ್ದಾರೆ‘ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇಸ್ಲಾಂ ಸಿದ್ಧಾಂತ ವಿರೋಧಿಸಿದ ಕಾರಣಕ್ಕಾಗಿ ಮೂಲಭೂತವಾದಿ ಸಂಘಟನೆಗಳಿಂದ ಕೊಲೆ ಬೆದರಿಕೆ ಎದುರಿಸುತ್ತಾ, 1994ರಲ್ಲಿ ಬಾಂಗ್ಲಾದೇಶ ತೊರೆದಿದ್ದ ತಸ್ಲಿಮಾ ನಸ್ರೀನ್, ‘ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಭಾವನೆ ಹೊಸದೇನಲ್ಲ. ಹಾಗೆಯೇ, ದುರ್ಗಾ ಪೂಜೆ ಸಮಯದಲ್ಲಿ ಹಿಂದೂಗಳಿಗೆ ರಕ್ಷಣೆ ನೀಡದಿರುವುದು ತೀರಾ ವಿಚಿತ್ರವಾಗಿದೆ‘ ಎಂದು ಹೇಳಿದ್ದಾರೆ.
‘ಪ್ರತಿ ವರ್ಷ ದುರ್ಗಾ ಪೂಜೆ ಸಮಯದಲ್ಲಿ ಹಿಂದೂಗಳ ಮೇಲೆ 'ಜಿಹಾದಿ' ದಾಳಿ ನಡೆಯುವ ಸಾಧ್ಯತೆ ಬಗ್ಗೆ ಪ್ರಧಾನಿ ಶೇಖ್ ಹಸೀನಾಗೆ ಚೆನ್ನಾಗಿ ತಿಳಿದಿದೆ. ಆದರೂ ಹಿಂದೂ ಅಲ್ಪಸಂಖ್ಯಾತರಿಗೆ ಏಕೆ ರಕ್ಷಣೆ ನೀಡಲಿಲ್ಲ‘ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.