ಲಖನೌ/ಕಾನ್ಪುರ: ನನ್ನಂತಹ ಸಾಮಾನ್ಯ ಹಳ್ಳಿಯೊಂದರ ಹುಡುಗನಿಗೆ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಗೌರವ ಸಿಗುತ್ತದೆ ಎಂದು ಊಹಿಸಿರಲಿಲ್ಲ ಮತ್ತು ಇದಕ್ಕಾಗಿ ತಾನು ಹುಟ್ಟಿದ ಸ್ಥಳದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.
ಅವರ ಹುಟ್ಟೂರಾದ ಕಾನ್ಪುರದ ದೇಹತ್ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಅವರು ಜನರನ್ನುದ್ದೇಶಿಸಿ ಮಾತನಾಡಿದರು.
'ನನ್ನಂತಹ ಹಳ್ಳಿಯೊಂದರ ಸಾಮಾನ್ಯ ಹುಡುಗನಿಗೆ ಈ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಗೌರವ ಸಿಗುತ್ತದೆ ಎಂದು ನನ್ನ ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಇದನ್ನು ಸಾಧ್ಯವಾಗಿಸಿದೆ' ಎಂದು ಹೇಳಿದರು.
'ಇಂದು ನಾನು ಯಾವುದೇ ಸ್ಥಾನಕ್ಕೇರಿದ್ದರೂ ಕೂಡ ಅದರ ಶ್ರೇಯಸ್ಸು ಈ ಹಳ್ಳಿಯ ಮಣ್ಣು, ಈ ಪ್ರದೇಶ ಮತ್ತು ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ಸಲ್ಲುತ್ತದೆ' ಎಂದ ಅವರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ರಚಿಸಿದವರಿಗೆ ಗೌರವ ನಮನ ಸಲ್ಲಿಸಿದರು.
'ನನ್ನ ಕುಟುಂಬದ 'ಸಂಸ್ಕಾರ' (ಮೌಲ್ಯಗಳು) ಪ್ರಕಾರ, ಯಾವುದೇ ಜಾತಿ ಅಥವಾ ಸಮುದಾಯವನ್ನು ಲೆಕ್ಕಿಸದೆ ಹಳ್ಳಿಯ ಹಿರಿಯ ಮಹಿಳೆಗೆ ತಾಯಿಯ ಸ್ಥಾನಮಾನವನ್ನು ಮತ್ತು ಹಿರಿಯ ಪುರುಷನಿಗೆ ತಂದೆಯ ಸ್ಥಾನಮಾನವನ್ನು ನೀಡಲಾಗುತ್ತದೆ. ಹಿರಿಯರಿಗೆ ಗೌರವ ನೀಡುವ ಈ ಸಂಪ್ರದಾಯವು ನಮ್ಮ ಕುಟುಂಬದಲ್ಲಿ ಇನ್ನೂ ಮುಂದುವರಿದಿದೆ ಎಂಬುದು ನನಗೆ ಸಂತೋಷವಾಗಿದೆ' ಎಂದು ಹೇಳಿದರು.
'ಈ ಹಳ್ಳಿಯ ಮಣ್ಣಿನ ಪರಿಮಳ ಮತ್ತು ಅಲ್ಲಿನ ಜನರ ನೆನಪುಗಳು ಯಾವಾಗಲೂ ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುತ್ತವೆ. ನನ್ನ ಪಾಲಿಗೆ ಪರೌಂಖ್ ಎನ್ನುವುದು ಒಂದು ಹಳ್ಳಿ ಮಾತ್ರವಲ್ಲ, ಬದಲಿಗೆ ದೇಶಸೇವೆಯನ್ನು ಮಾಡಲು ನನಗೆ ಸ್ಫೂರ್ತಿ ಸಿಕ್ಕ 'ಮಾತೃಭೂಮಿ'' ಎಂದು ಕೋವಿಂದ್ ಹೇಳಿದರು.
'ಈ ಸ್ಫೂರ್ತಿಯೇ ನನಗೆ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್ ಮತ್ತು ರಾಜ್ಯಸಭೆಯವರೆಗೆ ತಲುಪುವಂತೆ ಅನುವು ಮಾಡಿಕೊಟ್ಟಿತು. ರಾಜ್ಯಸಭೆಯಿಂದ ನಾನು ರಾಜ ಭವನಕ್ಕೆ ಮತ್ತು ಅಲ್ಲಿಂದ ರಾಷ್ಟ್ರಪತಿ ಭವನಕ್ಕೆ ಬಂದಿದ್ದೇನೆ'. 'ಜನ್ಮ (ಮಗುವಿಗೆ) ನೀಡುವ ತಾಯಿಯು ಹೆಮ್ಮೆ ಮತ್ತು 'ಜನ್ಮಭೂಮಿ'ಯು ಸ್ವರ್ಗಕ್ಕಿಂತಲೂ ದೊಡ್ಡದಾಗಿದೆ' ಎಂದು ಸಂಸ್ಕೃತದ ಸಾಲೊಂದನ್ನು ಹೇಳಿದರು.
ಕೋವಿಂದ್ ಅವರು ಭಾನುವಾರ ಬೆಳಿಗ್ಗೆ ಪರೌಂಖ್ ಗ್ರಾಮವನ್ನು ತಲುಪಿದರು, ಅಲ್ಲಿ ಅವರನ್ನು ಉತ್ತರ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು ಎಂದು ಎಸ್ಪಿ ಕಾನ್ಪುರದ ದೇಹತ್ ಅವರ ಪಿಆರ್‌ಒ ವಿಕಾಸ್ ರೈ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.