ಕಲ್ಕತ್ತಾ: ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ (ಜಿಆರ್‌ಎಸ್‌ಇ) ಲಿಮಿಟೆಡ್ ಸೋಮವಾರ ದೇಶದಲ್ಲಿ ನಿರ್ಮಾಣವಾದ ಅತಿದೊಡ್ಡ ಸಮೀಕ್ಷಾ ನೌಕೆ, 'ಐಎನ್‌ಎಸ್ ಸಂಧಾಯಕ್' ಅನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೌಕಾಪಡೆಗಾಗಿ ಜಿಆರ್‌ಎಸ್‌ಇ ತಯಾರಿಸುತ್ತಿರುವ ನಾಲ್ಕು ಸಮೀಕ್ಷಾ ನೌಕೆಗಳಲ್ಲಿ ಇದು ಮೊದಲನೆಯದು. 110 ಮೀಟರ್ ಉದ್ದದ ಹಡಗನ್ನು ನೌಕಾಪಡೆಯ ದಿನ(ಡಿ.4)ದಂದೇ ಹಸ್ತಾಂತರಿಸಲಾಗಿದೆ ಎಂದು ಜಿಆರ್‌ಎಸ್‌ಇ ಅಧಿಕಾರಿ ತಿಳಿಸಿದ್ದಾರೆ.
ಐಎನ್‌ಎಸ್ ಸಂಧಾಯಕ್ ಅದೇ ಹೆಸರಿನ ಮತ್ತೊಂದು ಹಡಗಿನ ಮರುಸೃಷ್ಟಿಯಾಗಿದೆ. ಅದು ಕೂಡ ಸಮೀಕ್ಷಾ ನೌಕೆಯಾಗಿತ್ತು. ಆ ಹಡಗನ್ನು 1981ರಲ್ಲಿ ನೌಕಾಪಡೆಗೆ ಸೇರ್ಪಡೆ ಮಾಡಲಾಗಿತ್ತು. ಬಳಿಕ 2021ರಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು.
ಜಿಆರ್‌ಎಸ್‌ಇಯಿಂದ ಸಂಪೂರ್ಣವಾಗಿ ವಿನ್ಯಾಸಗೊಳಿಸಲ್ಪಟ್ಟ ಈ ಸಮೀಕ್ಷಾ ಹಡಗುಗಳು ಬಂದರು ಹಾಗೂ ಪೂರ್ಣ ಪ್ರಮಾಣದ ಕರಾವಳಿ ಮತ್ತು ಆಳವಾದ ನೀರಿನ ಹೈಡ್ರೋಗ್ರಾಫಿಕ್ ಸಮೀಕ್ಷೆ ಮತ್ತು ನ್ಯಾವಿಗೇಷನ್ ಚಾನೆಲ್‌ಗಳು ಮತ್ತು ಮಾರ್ಗಗಳ ನಿರ್ಣಯಕ್ಕೆ ಸಮರ್ಥವಾಗಿವೆ.
ಸಂಧಾಯಕ್ ವರ್ಗದ ಹಡಗುಗಳ ಮೂಲಕ ಸಮುದ್ರದ ಮಿತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಬಹುದು. ರಕ್ಷಣಾ ಕಾರ್ಯಗಳಿಗಾಗಿ ಸಮುದ್ರಶಾಸ್ತ್ರ ಮತ್ತು ಭೌಗೋಳಿಕ ದತ್ತಾಂಶಗಳ ಸಂಗ್ರಹಣೆ ಮಾಡಬಹುದು. ಇದು ಭಾರತದ ಕಡಲ ಸಾಮರ್ಥ್ಯಕ್ಕೆ ಬಲ ನೀಡುತ್ತದೆ ಅವರು ಹೇಳಿದರು.
ಈ ಹಡಗುಗಳಲ್ಲಿ ಹೆಲಿಕಾಪ್ಟರ್ ಅನ್ನು ಒಯ್ಯಬಹುದು. ಯುದ್ಧದಲ್ಲಿ ಭಾಗವಹಿಸಬಹುದು. ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆ ಮಾತ್ರವಲ್ಲದೇ ಆಸ್ಪತ್ರೆ ಹಡಗುಗಳಾಗಿ ಕಾರ್ಯನಿರ್ವಹಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.