ADVERTISEMENT

ಮುಂಬೈ ಗಣಪತಿಗೆ ₹360 ಕೋಟಿ ವಿಮೆ!

ಪಿಟಿಐ
Published 6 ಸೆಪ್ಟೆಂಬರ್ 2023, 13:46 IST
Last Updated 6 ಸೆಪ್ಟೆಂಬರ್ 2023, 13:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಶ್ರೀಮಂತ ಗಣಪತಿ ಮಂಡಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಬೈನ ಜಿಎಸ್‌ಬಿ ಸೇವಾ ಮಂಡಲದ ಮಹಾ ಗಣೇಶನಿಗೆ ಈ ಬಾರಿ ₹ 360.40 ಕೋಟಿ ವಿಮೆ ಮಾಡಿಸಲಾಗಿದೆ.

ಮುಂಬೈನ ಕಿಂಗ್‌ ಸರ್ಕಲ್‌ನಲ್ಲಿ ಈ ಗಣೇಶ ಮಂಡಲವಿದ್ದು, ಜನಸಾಮಾನ್ಯರು ಸೇರಿದಂತೆ ಖ್ಯಾತನಾಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಬಾರಿ 69ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ಸಮಿತಿಯಿಂದ ಭರದ ಸಿದ್ಧತೆ ನಡೆದಿದೆ. 

ಕಳೆದ ವರ್ಷ ಜಿಎಸ್‌ಬಿ ಮಂಡಲವು ₹ 316.40 ಕೋಟಿ ವಿಮೆ ಮಾಡಿಸಿತ್ತು. ಈ ಬಾರಿ ವಿಮಾ ಮೊತ್ತವು ₹ 44 ಕೋಟಿ ಹೆಚ್ಚಾಗಿದೆ. ಆದಾಗ್ಯೂ, ಎಷ್ಟು ಪ್ರೀಮಿಯಂ ಪಾವತಿಸಲಾಗಿದೆ ಎಂಬ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ. ವಿಮಾ ಮೊತ್ತದ ಬಗ್ಗೆಯಷ್ಟೇ ಟ್ರಸ್ಟಿ ಹಾಗೂ ವಕ್ತಾರ ಅಮಿತ್‌ ಡಿ. ಪೈ ಮಾಹಿತಿ ನೀಡಿದ್ದಾರೆ.

ADVERTISEMENT

ಗಣೇಶನಿಗೆ ತೊಡಿಸುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ₹ 38.47 ಕೋಟಿ, ಉತ್ಸವದ ವೇಳೆ ಸಂಭವಿಸುವ ಅನಾಹುತಗಳಿಗೆ ಪರಿಹಾರವಾಗಿ ₹ 2 ಕೋಟಿ ವಿಮೆ ಮಾಡಿಸಲಾಗಿದೆ. ಇದರಲ್ಲಿ ಭೂಕಂಪ ಹಾಗೂ ಅಗ್ನಿ ಅವಘಡದಿಂದಾಗುವ ಹಾನಿಯು ಒಳಗೊಂಡಿದೆ.

ಸಾರ್ವಜನಿಕ ಹೊಣೆಗಾರಿಕೆಯಡಿ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್‌, ಕ್ರೀಡಾಂಗಣ ಹಾಗೂ ಭಕ್ತರಿಗಾಗಿ ₹ 30 ಕೋಟಿ ವಿಮೆ ಮಾಡಿಸಲಾಗಿದೆ. ಉಳಿದಂತೆ ಸ್ವಯಂ ಸೇವಕರು, ಅರ್ಚಕರು, ಅಡುಗೆ ಸಿಬ್ಬಂದಿ, ಪಾದರಕ್ಷೆ ಕಾಯುವ ಸಿಬ್ಬಂದಿ, ರಕ್ಷಣಾ ಸಿಬ್ಬಂದಿಗಾಗಿ ₹ 289.50 ಕೋಟಿ ವಿಮೆ ಮಾಡಿಸಲಾಗಿದೆ. ಮೂರ್ತಿ ಪ್ರತಿಷ್ಠಾ‍ಪನಾ ಸ್ಥಳದಲ್ಲಿ ಸಂಭವಿಸುವ ಅಗ್ನಿ ಅವಘಡಗಳಿಗೆ ₹ 43 ಕೋಟಿ ವಿಮೆ ಮಾಡಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.