ಶ್ರೀಹರಿಕೋಟಾ: ಹವಾಮಾನ ಮಾಹಿತಿ ರವಾನಿಸುವ 3ನೇ ತಲೆಮಾರಿನ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಿದ ಜಿಎಸ್‌ಎಲ್‌ವಿ ರಾಕೆಟ್, ಅದನ್ನು ನಿಗದಿತ ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
ಇನ್‌ಸಾಟ್–3ಡಿಎಸ್ ಉಪಗ್ರಹವು ಭೂಮಿಯ ಮೇಲ್ಮೈ ಹಾಗೂ ಸಾಗರಗಳ ಮೇಲೆ ನಿಗಾವಹಿಸಿ ಅಧ್ಯಯನ ನಡೆಸಲಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ 2ನೇ ಉಡ್ಡಯನ ವೇದಿಕೆಯಿಂದ ಶನಿವಾರ ನಭಕ್ಕೆ ಚಿಮ್ಮಿದ 51.7 ಮೀಟರ್ ಎತ್ತರದ ಜಿಎಸ್‌ಎಲ್‌ವಿ–ಎಫ್14 ಮೇಲೇರುತ್ತಿದ್ದಂತೆ ವಿಜ್ಞಾನಿಗಳ ಹರ್ಷಕ್ಕೆ ಪಾರವೇ ಇರಲಿಲ್ಲ. 2,274 ಕೆ.ಜಿ. ತೂಕದ ಉಪಗ್ರಹವನ್ನು ತನ್ನೊಡಲಲ್ಲಿಟ್ಟುಕೊಂಡು ದಟ್ಟ ಹೊಗೆಯುಗುಳಿ, ಘರ್ಜಿಸುತ್ತಾ ಆಗಸದತ್ತ ಸಾಗಿದ ರಾಕೆಟ್, ಕೆಲವೇ ನಿಮಿಷಗಳಲ್ಲಿ ನಿಗದಿತ ಕಕ್ಷೆ ತಲುಪಿತು. ಯೋಜನೆಯಂತೆಯೇ ನಡೆದ ಈ ಕಾರ್ಯಚರಣೆಗೆ ವಿಜ್ಞಾನಿಗಳು ಹರ್ಷ ವ್ಯಕ್ತಪಡಿಸಿದರು.
ಈ ಉಪಗ್ರಹದ ಅಭಿವೃದ್ಧಿಯಲ್ಲಿ ಭೂವಿಜ್ಞಾನ, ಹವಾಮಾನ ಇಲಾಖೆ ಮತ್ತು ಇಸ್ರೊ ಜತೆಗೂಡಿದ್ದವು. 2024ರಲ್ಲಿ ಇಸ್ರೊ ಕೈಗೊಂಡ 2ನೇ ಯಶಸ್ವಿ ಉಡ್ಡಯನ ಇದಾಗಿದೆ. ಎಕ್ಸ್‌ಪೊಸಾಟ್ ಯೋಜನೆಯು ಜ. 1ರಂದು ನಡೆದಿತ್ತು. ಆಗ ಪಿಎಸ್‌ಎಲ್‌ವಿ ರಾಕೆಟ್ ಬಳಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.