ADVERTISEMENT

ಕೋಚಿಂಗ್‌ ಕೇಂದ್ರಗಳಿಗೆ ಮಾರ್ಗಸೂಚಿ ಪ್ರಕಟ

ದಿಕ್ಕು ತಪ್ಪಿಸುವ ಜಾಹೀರಾತು ಪ್ರಕಟಿಸದಂತೆ ಕೇಂದ್ರ ಸರ್ಕಾರ ಸೂಚನೆ

ಪಿಟಿಐ
Published 13 ನವೆಂಬರ್ 2024, 23:29 IST
Last Updated 13 ನವೆಂಬರ್ 2024, 23:29 IST
   

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳನ್ನು ದಿಕ್ಕು ತಪ್ಪಿಸುವಂತಹ ಜಾಹೀರಾತು ಪ್ರಕಟಿಸದಂತೆ ಕೋಚಿಂಗ್‌ ಕೇಂದ್ರಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರವು, ಬುಧವಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

‘ನಮ್ಮ ಕೋಚಿಂಗ್‌ ಕೇಂದ್ರದಲ್ಲಿ ತರಬೇತಿ ಪಡೆದರೆ ಉದ್ಯೋಗಕ್ಕೆ ಆಯ್ಕೆಯಾಗುವುದು ಶೇ 100ರಷ್ಟು ಖಚಿತ ಅಥವಾ ಉದ್ಯೋಗ ಲಭಿಸುವುದು ಗ್ಯಾರಂಟಿ’ ಎಂಬ ಜಾಹೀರಾತು ಪ್ರಕಟಿಸದಂತೆ ನಿರ್ಬಂಧ ಹೇರಲಾಗಿದೆ. 

ಕೇಂದ್ರಗಳಿಂದ ಪರೀಕ್ಷಾರ್ಥಿಗಳನ್ನು ದಾರಿ ತಪ್ಪಿಸುವಂತಹ ಜಾಹೀರಾತುಗಳು ಪ್ರಕಟವಾಗುತ್ತಿರುವ ಬಗ್ಗೆ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರಕ್ಕೆ ‌(ಸಿಸಿಪಿಎ) ಹಲವು ದೂರು ಸಲ್ಲಿಕೆಯಾಗಿದ್ದವು. ಈ ಸಂಬಂಧ ಕೇಂದ್ರಗಳಿಗೆ 54 ನೋಟಿಸ್‌ ನೀಡಿರುವ ಪ್ರಾಧಿಕಾರವು, ಇಲ್ಲಿಯವರೆಗೆ ₹54.60 ಲಕ್ಷ ದಂಡ ವಿಧಿಸಿದೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ, ‘ವಿದ್ಯಾರ್ಥಿಗಳಿಗೆ ನೈಜ ಮಾಹಿತಿ ನೀಡದೆ ಈ ಕೇಂದ್ರಗಳು ಸತ್ಯ ಮರೆಮಾಚುವುದನ್ನು ನೋಡುತ್ತಿದ್ದೇವೆ. ಹಾಗಾಗಿ, ಈ ಮಾರ್ಗಸೂಚಿ ಪ್ರಕಟಿಸಲಾಗಿದೆ’ ಎಂದರು.

‘ಸರ್ಕಾರವು ಯಾವುದೇ ಕೋಚಿಂಗ್‌ ಕೇಂದ್ರದ ವಿರುದ್ಧವಿಲ್ಲ. ಆದರೆ, ಕೋಚಿಂಗ್‌ ಹೆಸರಿನಲ್ಲಿ ಪ್ರಕಟಿಸುವ ಯಾವುದೇ ಜಾಹೀರಾತುಗಳು ಗ್ರಾಹಕರ ಹಕ್ಕುಗಳಿಗೆ ಧಕ್ಕೆ ತರಬಾರದು’ ಎಂದು ಹೇಳಿದರು.

‘ಯುಪಿಎಸ್‌ಇ ಪರೀಕ್ಷೆ ಬರೆಯುವ ಬಹಳಷ್ಟು ವಿದ್ಯಾರ್ಥಿಗಳು ಸ್ವಸಾಮರ್ಥ್ಯದ ಮೇಲೆ ಪ್ರಿಲಿಮ್ಸ್‌ ಮತ್ತು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ, ಕೋಚಿಂಗ್ ಕೇಂದ್ರಗಳಲ್ಲಿ ಸಂದರ್ಶನ ಎದುರಿಸುವ ಬಗ್ಗೆಯಷ್ಟೇ ಮಾರ್ಗದರ್ಶನ ಪಡೆದಿರುತ್ತಾರೆ. ಹಾಗಾಗಿ, ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಕೇಂದ್ರದಲ್ಲಿ ಯಾವ ಕೋರ್ಸ್‌ಗಳಿಗೆ ದಾಖಲಾಗಿದ್ದರು ಅಥವಾ ಯಾವ ತರಬೇತಿ ಪಡೆದಿದ್ದರು ಎಂಬ ಬಗ್ಗೆ ಕೇಂದ್ರಗಳಿಗೆ ಪ್ರವೇಶಾತಿ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ತಿಳಿಸಬೇಕಿದೆ ಎಂದರು.

ನಿಯಮಾವಳಿ ಉಲ್ಲಂಘಿಸಿದರೆ ಗ್ರಾಹಕರ ರಕ್ಷಣಾ ಕಾಯ್ದೆಯಡಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. 

ಯಾವುದಕ್ಕೆ ನಿರ್ಬಂಧ?

‘ಕೋಚಿಂಗ್ ಸೆಕ್ಟರ್‌ನಲ್ಲಿ ದಾರಿ ತಪ್ಪಿಸುವ ಜಾಹೀರಾತು ತಡೆಗಟ್ಟುವಿಕೆ’ ಎಂಬ ಶೀರ್ಷಿಕೆಯಡಿ ಈ ಮಾರ್ಗಸೂಚಿ ಪ್ರಕಟಿಸಲಾಗಿದೆ. 

ಕೋರ್ಸ್‌ಗಳು ಮತ್ತು ತರಬೇತಿ ಅವಧಿ, ತರಬೇತಿ ಸಿಬ್ಬಂದಿಯ ಪರಿಚಯ, ಶುಲ್ಕ ಮತ್ತು ಮರುಪಾವತಿ, ಆಯ್ಕೆಯ ಮಾನದಂಡ ಮತ್ತು ಪರೀಕ್ಷಾ ರ‍್ಯಾಂಕ್‌ಗಳ ಬಗ್ಗೆ ಜಾಹೀರಾತಿನ ಮೂಲಕ ಸುಳ್ಳು ಮಾಹಿತಿಯನ್ನು
ಪ್ರಚಾರಪಡಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

‘ಕೋಚಿಂಗ್‌’ ಎಂದರೆ ಶೈಕ್ಷಣಿಕ ಬೆಂಬಲ, ಶಿಕ್ಷಣ, ಮಾರ್ಗದರ್ಶನ, ಅಧ್ಯಯನ ಕಾರ್ಯಕ್ರಮ ಮತ್ತು ಬೋಧನೆ ಎಂದು ವ್ಯಾಖ್ಯಾನಿಸಲಾಗಿದೆ. ಕೌನ್ಸೆಲಿಂಗ್‌, ಕ್ರೀಡೆಗಳು ಮತ್ತು ಸೃಜನಶೀಲ ಚಟುವಟಿಕೆಗಳು ಇದರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾದವರ ಹೆಸರು, ಭಾವಚಿತ್ರ ಅಥವಾ ಪ್ರಶಂಸಾ ಪತ್ರಗಳನ್ನು ಅವರ ಲಿಖಿತ ಅನುಮತಿ ಇಲ್ಲದೆ ಕೋಚಿಂಗ್‌ ಕೇಂದ್ರಗಳು ಬಳಸುವಂತಿಲ್ಲ. ತರಬೇತಿ ನೀಡುವ ಕೋರ್ಸ್‌ಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಪ್ರಕಟಿಸಬೇಕಿದೆ ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.