ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ನೆಲ ಗುಜರಾತ್‌ನಲ್ಲಿ ಎದುರಾದ ಪ್ರತಿಕೂಲ ಸನ್ನಿವೇಶಗಳನ್ನೇ ಅನುಕೂಲಕಾರಿಯಾಗಿ ಪರಿವರ್ತಿಸಿಕೊಂಡ ಕಮಲ ಪಡೆಯು ಕಾಂಗ್ರೆಸ್ ಅನ್ನು ‘ಪಾತಾಳ‘ಕ್ಕೆ ತಳ್ಳಿ ಗುರುವಾರ ಪ್ರಚಂಡ ದಿಗ್ವಿಜಯ ಸಾಧಿಸಿದೆ. ಕಣಿವೆ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್ ಮುಯ್ಯಿ ತೀರಿಸಿಕೊಂಡಿದೆ. ಮತ್ತೆರಡು ರಾಜ್ಯಗಳ ಚುಕ್ಕಾಣಿ ಹಿಡಿಯಬೇಕು ಎಂಬ ಆಮ್ ಆದ್ಮಿ ಪಕ್ಷದ (ಎಎಪಿ) ಮಹತ್ವಾಕಾಂಕ್ಷೆಗೆ ಮತದಾರರು ಮಣೆ ಹಾಕಿಲ್ಲ.
‘ನರೇಂದ್ರ ಮೋದಿ ಬ್ರ್ಯಾಂಡ್’ ಅನ್ನು ಬಲವಾಗಿನೆಚ್ಚಿಕೊಂಡು ‘ಗುಜರಾತ್ ಮಾದರಿ ಅಭಿವೃದ್ಧಿ’ ಹಾಗೂ ಜಾತಿ ಸಮೀಕರಣಕ್ಕೆ ಒತ್ತು ನೀಡಿ ರಾಷ್ಟ್ರೀಯತೆಯ ಮಂತ್ರ ಜಪಿಸಿದ ಬಿಜೆಪಿಯು ಗುಜರಾತ್‌ನಲ್ಲಿ ಸತತ ಏಳನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿನ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರದ ಸತತ ಏಳು ಚುನಾವಣೆಗಳ ಗೆಲುವಿನ ದಾಖಲೆಯನ್ನು ಸರಿಗಟ್ಟಿದೆ. ಗುಜರಾತ್‌ನಲ್ಲಿ ಮೊದಲ ಬಾರಿಗೆ ಶೇ 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ಹಿರಿಮೆಗೂ ಪಾತ್ರವಾಗಿದೆ. ಅಲ್ಲದೆ, ಕಾಂಗ್ರೆಸ್‌ನ ಮಾಧವಸಿನ್ಹ ಸೋಳಂಕಿ ನೇತೃತ್ವದಲ್ಲಿ ಕಾಂಗ್ರೆಸ್ 37 ವರ್ಷಗಳ ಹಿಂದೆ ಸ್ಥಾಪಿಸಿದ್ದ ಅತ್ಯಧಿಕ ಕ್ಷೇತ್ರಗಳ ಗೆಲುವಿನ ದಾಖಲೆಯನ್ನೂ(1985ರಲ್ಲಿ 149 ಕ್ಷೇತ್ರಗಳಲ್ಲಿ ಜಯ) ಪುಡಿಗಟ್ಟಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟಕ್ಕೆ ಕೆಲವೇ ದಿನಗಳ ಮೊದಲು ಮೊರ್ಬಿ ತೂಗುಸೇತುವೆ ಕುಸಿದು 135 ಜನರು ಮೃತಪಟ್ಟಿದ್ದರು. ಇದರಿಂದ, ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂಬ ಚರ್ಚೆಗಳು ನಡೆದಿದ್ದವು. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿತ್ತು. ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದಾಗಿ ಗುಜರಾತ್ ಸರ್ಕಾರ ಮುಜುಗರಕ್ಕೆ ಒಳಗಾಗಿತ್ತು. ನದಿಗಳ ಜೋಡಣೆ ವಿರುದ್ಧ ಆದಿವಾಸಿಗಳು ಭಾರಿ ಹೋರಾಟ ನಡೆಸಿದ್ದರು. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಜನರಲ್ಲಿ ಅಸಹನೆ ವ್ಯಕ್ತವಾಗಿತ್ತು. ಉತ್ತರ ಪ್ರದೇಶದಲ್ಲಿ ಪಕ್ಷ ಮರಳಿ ಗದ್ದುಗೆಗೆ ಏರಿದ ಬೆನ್ನಲ್ಲೇ ತವರು ರಾಜ್ಯದಲ್ಲಿ ಅಖಾಡಕ್ಕೆ ಇಳಿದ ನರೇಂದ್ರ ಮೋದಿ ಅವರು ‘ಅಭಿವೃದ್ಧಿ ಯೋಜನೆ’ಗಳ ಮೂಲಕ ಜನರ ಮನ ಗೆಲ್ಲುವ ಪ್ರಯತ್ನಕ್ಕೆ ಕೈ ಹಾಕಿದರು. ನಾಲ್ಕು ತಿಂಗಳಲ್ಲೇ ₹1.10 ಲಕ್ಷ ಕೋಟಿಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು 42 ಹಾಲಿ ಶಾಸಕರಿಗೆ ಪಕ್ಷವು ಟಿಕೆಟ್ ನಿರಾಕರಿಸಿತು.
ಒಂದನೇ ಪುಟದಿಂದ...
‘ಕೈ’ ಪಾಳಯದ ಮೂವತ್ತು ಶಾಸಕರನ್ನು (ಮೂರು ವರ್ಷಗಳಲ್ಲಿ 17 ಮಂದಿ ಮತ್ತು ಚುನಾವಣಾ ಪೂರ್ವದಲ್ಲಿ 13 ಮಂದಿ) ಸೆಳೆದು ಕಣಕ್ಕೆ ಇಳಿಸಿತು. ಟಿಕೆಟ್ ಹಂಚಿಕೆಯಲ್ಲಿ ‘ಖಾಪ್’ (ಕ್ಷತ್ರಿಯ–ದಲಿತ (ಹರಿಜನ)–ಆದಿವಾಸಿ–ಪಾಟೀದಾರ್) ಸೂತ್ರ ಅಳವಡಿಸಿಕೊಂಡಿತು. ದಶಕಗಳಿಂದ ‘ಕೈ’ ಮೇಲೆ ಹೆಚ್ಚಿನ ಪ್ರೀತಿ ತೋರುತ್ತಿದ್ದ ಆದಿವಾಸಿಗಳ ಮೇಲೆ ಕೇಸರಿ ಪಡೆಯು ಈ ಸಲ ಭಾವನಾತ್ಮಕ ಅಸ್ತೃ ಪ್ರಯೋಗಿಸಿತು. ಆದಿವಾಸಿಗಳನ್ನು ದೇಶದ ಉನ್ನತ ಹುದ್ದೆಗೆ (ರಾಷ್ಟ್ರಪತಿ) ಏರಿಸಿದ ಪಕ್ಷ ತಮ್ಮದು ಎಂಬುದನ್ನು ನರೇಂದ್ರ ಮೋದಿ ಚುನಾವಣಾ ಕಣದಲ್ಲಿ ಪದೇ ಪದೇ ಪ್ರಸ್ತಾಪಿಸಿದರು. ಮೋದಿ ಅವರು 35ಕ್ಕೂ ಅಧಿಕ ರ‍್ಯಾಲಿಗಳಲ್ಲಿ ಪಾಲ್ಗೊಂಡು ಅಭಿವೃದ್ಧಿ ಹಾಗೂ ರಾಷ್ಟ್ರೀಯತೆಯ ಮಂತ್ರ ಜಪಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ರಾವಣನ ಹೋಲಿಕೆ’ ಹೇಳಿಕೆಯನ್ನೂ ಬಿಜೆಪಿ ಪ್ರಬಲ ಹತಾರವನ್ನಾಗಿ ಮಾಡಿಕೊಂಡಿತು. ‘ಮೋದಿ ಭಾಯಿ’ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಹೇಳಿ ಮತ ಕ್ರೋಡೀಕರಣಕ್ಕೆ ಮುಂದಾಯಿತು.
2017ರ ಚುನಾವಣೆಯಲ್ಲಿ ಬಿಜೆಪಿ ಬೆವರುವಂತೆ ಮಾಡಿದ್ದ ಕಾಂಗ್ರೆಸ್ ಈ ಸಲ ಚುನಾವಣೆಗೆ ಮುನ್ನವೇ ಶಸ್ತ್ರತ್ಯಾಗ ಮಾಡಿತ್ತು. ತಮ್ಮ ಭವಿಷ್ಯ ಭದ್ರ ಮಾಡಿಕೊಳ್ಳಲು ಯುವ ಮುಂದಾಳುಗಳಾದ ಹಾರ್ದಿಕ್ ಪಟೇಲ್ ಹಾಗೂ ಅಲ್ಪೆಶ್ ಠಾಕೂರ್ ಕಾಂಗ್ರೆಸ್ ಪಕ್ಷದಿಂದ ಹೊರ ನಡೆದು ಮೋದಿ ನೆರಳಲ್ಲಿ ಆಶ್ರಯ ಪಡೆದರೆ, ‘ಭಾರತ್ ಜೋಡೋ ಯಾತ್ರೆ’ಯಲ್ಲಿದ್ದ ರಾಹುಲ್ ಗಾಂಧಿ ಅವರು ಕಾಟಾಚಾರಕ್ಕೆ ಒಮ್ಮೆ ಮಾತ್ರ ಗುಜರಾತ್‌ನಲ್ಲಿ ಪ್ರಚಾರ ಮಾಡಿದರು. ಪ್ರಬಲ ಎದುರಾಳಿಗಳು ಕಣದಲ್ಲಿದ್ದ ಕಾರಣ ದಲಿತ ನಾಯಕ ಜಿಗ್ನೇಶ್ ಮೆವಾನಿ ಅವರು ತಮ್ಮ ಕ್ಷೇತ್ರಕ್ಕೆ ಹೆಚ್ಚು ಸಮಯ ಮೀಸಲಿಡಬೇಕಾಯಿತು.
ಕಾಂಗ್ರೆಸ್‌ನ ಮತ ಗಳಿಕೆ ಪ್ರಮಾಣ ಯಾವತ್ತೂ ಶೇ 30ಕ್ಕಿಂತ ಕೆಳಕ್ಕೆ ಇಳಿದಿರಲಿಲ್ಲ. ಬಿಜೆಪಿ ವಿರೋಧಿ ಮತಗಳೆಲ್ಲ ‘ಕೈ’ ಬುಟ್ಟಿಗೆ ಬೀಳುತ್ತಿತ್ತು. ಈ ಸಲ ಎಎಪಿ ಪ್ರವೇಶದಿಂದಾಗಿ ರಾಜಕೀಯ ಸಮೀಕರಣ ಬದಲಾಯಿತು. ಎಎಪಿಯು 5 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿದರೂ ಪಡೆದ ಮತ ಪ್ರಮಾಣ ಶೇ 12.9ರಷ್ಟು. ಆ ಪಕ್ಷವು ಕಾಂಗ್ರೆಸ್‌ನ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಕಿತ್ತುಕೊಂಡಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳಲ್ಲಿ ಗೆದ್ದು ಶೇ 49.44 ಮತಗಳನ್ನು ಪಡೆದಿತ್ತು. ಈ ಸಲ ಬಿಜೆಪಿ ಮತ ಪ್ರಮಾಣ ಶೇ 3ರಷ್ಟು ಹೆಚ್ಚಾಗಿದೆ. ಗೆದ್ದ ಕ್ಷೇತ್ರಗಳ ಸಂಖ್ಯೆ 156ಕ್ಕೆ ಜಿಗಿದಿದೆ. ತ್ರಿಕೋನ ಸ್ಪರ್ಧೆಯಿಂದ ಬಿಜೆಪಿಗೆ ಹೆಚ್ಚು ಅನುಕೂಲವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.