ಅಹಮದಾಬಾದ್: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫೆ. 1ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಪ್ರಂಶಶಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ರಿಷಿಕೇಶ್ ಪಟೇಲ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು 2024–25ನೇ ಸಾಲಿನ ಬಜೆಟ್ ಅನ್ನು ಫೆ. 2ರಂದು ಮಂಡಿಸಲಿದೆ. ಗುರುವಾರದಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನ ಭಾಷಣವನ್ನು ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಮಾಡಲಿದ್ದಾರೆ.
‘ವಿತ್ತ ಸಚಿವ ಕನುಭಾಯ್ ದೇಸಾಯಿ ಅವರು ಫೆ. 2ರಂದು ಬಜೆಟ್ ಮಂಡಿಸಲಿದ್ದಾರೆ. ಮುಂದಿನ 25 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಬಜೆಟ್ ಮಂಡಿಸಲಾಗುವುದು. ಫೆ. 5ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವನ್ನು ಪ್ರಶಂಸಿಸುವ ನಿರ್ಣಯವನ್ನು ಮಂಡಿಸಲಾಗುವುದು’ ಎಂದು ರಿಷಿಕೇಶ್ ತಿಳಿಸಿದ್ದಾರೆ.
‘ಫೆ. 29ರಂದು ಬಜೆಟ್ ಅಧಿವೇಶನ ಕೊನೆಗೊಳ್ಳಲಿದೆ. ‘ಗುಜರಾತ್ ಗೇಣಿದಾರರ ಹಾಗೂ ಕೃಷಿ ಭೂಮಿ ಕಾಯ್ದೆ’ ಮಸೂದೆಗಳು ಚರ್ಚೆಗೆ ಬರಲಿವೆ. ಇದರೊಂದಿಗೆ ಕೆಲವೊಂದು ಮಸೂದೆಗಳು ಅಂಗೀಕಾರ ಪಡೆಯಲಿವೆ’ ಎಂದಿದ್ದಾರೆ.
ಬೆಲೆ ಏರಿಕೆ, ನಿರುದ್ಯೋಗ ಹಾಗೂ 12 ಜನರ ಸಾವಿಗೆ ಕಾರಣವಾದ ವಡೋದರದಲ್ಲಿ ಸಂಭವಿಸಿದ ದೋಣಿ ದುರಂತ ವಿಷಯ ಪ್ರಸ್ತಾಪಿಸುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷ ಕಾಂಗ್ರೆಸ್ ಸಜ್ಜಾಗಿದೆ. ವೈಬ್ರಂಟ್ ಗುಜರಾತ್ ಸಮ್ಮಿಟ್‌ನಿಂದ ಈಗಾಗಲೇ ಲಾಭ ಪಡೆದ ವ್ಯಾಪಾರಿಗಳಿಗೆ ಲಾಭವಾಗಿದೆಯೇ ಹೊರತು, ಯುವಜನತೆಗಲ್ಲ. ಈ ಎಲ್ಲಾ ವಿಷಯಗಳನ್ನೂ ಪ್ರಸ್ತಾಪಿಸಿ ಉತ್ತರ ಕೇಳಲಾಗುವುದು’ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಶಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.