ADVERTISEMENT

ಗುಜರಾತ್‌: ₹600 ಕೋಟಿ ಮೌಲ್ಯದ 120 ಕೆ.ಜಿ ಹೆರಾಯಿನ್‌ ವಶ, ಮೂವರ ಬಂಧನ

ಪಿಟಿಐ
Published 15 ನವೆಂಬರ್ 2021, 10:12 IST
Last Updated 15 ನವೆಂಬರ್ 2021, 10:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್: ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ರಾಜ್ಯದ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್‌) ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹ 600 ಕೋಟಿ ಮೌಲ್ಯದ 120 ಕೆ.ಜಿ ಹೆರಾಯಿನ್‌ ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದೆ.

ಕಛ್‌ನ ನವಲಾಖಿ ಬಂದರು ಸಮೀಪ ಝಿಂಝುದಾ ಎಂಬಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಎಟಿಎಸ್‌ ಈ ಕಾರ್ಯಾಚರಣೆ ನಡೆಸಿತು ಎಂದು ಪೊಲೀಸ್‌ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಅರಬ್ಬಿ ಸಮುದ್ರದ ಭಾರತ–ಪಾಕಿಸ್ತಾನ ಜಲಗಡಿಯಲ್ಲಿ ಪಾಕಿಸ್ತಾನದ ಸಹಚರ ಜಹೀದ್ ಬಶೀರ್‌ ಬಲೂಚ್‌ ಎಂಬಾತ ಆರೋಪಿಗಳಾದ ಮುಖ್ತಾರ್‌ ಹುಸೇನ್‌ ಮತ್ತು ಸಂಶುದ್ದೀನ್‌ ಹುಸೇನ್‌ಮಿಯಾನ್‌ ಸೈಯದ್ ಅವರಿಗೆ ಈ ಹೆರಾಯಿನ್‌ ಹಸ್ತಾಂತರಿಸಿದ್ದ. ಪ್ರಕರಣದ ಇನ್ನೊಬ್ಬ ಆರೋಪಿಯನ್ನು ಗುಲಾಮ್ ಹುಸೇನ್‌ ಉಮರ್ ಬಗದ್‌ ಎಂದು ಗುರುತಿಸಲಾಗಿದೆ. ಆಫ್ರಿಕಾಗೆ ಸಾಗಿಸುವ ಯೋಜನೆ ರೂಪಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ADVERTISEMENT

’ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯ ಸಲಯ ಎಂಬಲ್ಲಿ ಈ ಹೆರಾಯಿನ್‌ ಅನ್ನು ಮೊದಲಿಗೆ ಬಚ್ಚಿಡಲಾಗಿತ್ತು. ಬಳಿಕ ಅದನ್ನು ಝಿಂಝುದಾಗೆ ಸಾಗಿಸಲಾಗಿತ್ತು. ಅಲ್ಲಿ ಅದನ್ನು ವಶಕ್ಕೆ ಪಡೆಯಲಾಯಿತು‘ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆಶಿಶ್ ಭಾಟಿಯಾ ಮಾಹಿತಿ ನೀಡಿದ್ದಾರೆ.

’ಗುಜರಾತ್ ಕರಾವಳಿ ಭಾಗದಲ್ಲಿ ಓಡಾಡುವ ಸಾವಿರಾರು ಮೀನುಗಾರಿಕಾ ದೋಣಿಗಳ ನಡುವೆ ಇಂತಹ ಡ್ರಗ್ಸ್‌ ಕಳ್ಳಸಾಗಣೆಯನ್ನು ಪತ್ತೆಹಚ್ಚಲಾಗದು ಎಂದು ಭಾವಿಸಿ ಇಂತಹ ದಂಧೆಯಲ್ಲಿ ಕಳ್ಳಸಾಗಣೆದಾರರು ಭಾಗಿಯಾಗಿದ್ದರು. ಆದರೆ ಗುಜರಾತ್ ಪೊಲೀಸರು ಈ ಜಾಲವನ್ನು ಭೇದಿಸುವಲ್ಲಿ ಸಫಲರಾದರು‘ ಎಂದು ಅವರು ತಿಳಿಸಿದರು.

ಕಳೆದ ವಾರ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ₹ 313 ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡು ಮೂವರನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ₹ 21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್‌ ಅನ್ನು ಮುಂದ್ರಾ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.