ನವದೆಹಲಿ: ‘ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಕುಸಿತವಾಗಿರುವುದಕ್ಕೆ ಆಡಳಿತಾರೂಢ ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ’ ಎಂದು ಸಿಪಿಐ ರಾಜ್ಯಸಭಾ ಸದಸ್ಯಬಿನೋಯ್ ವಿಶ್ವಂ ಟೀಕಿಸಿದ್ದಾರೆ.
‘ಆರು ತಿಂಗಳ ಕಾಲ ಸೇತುವೆಯ ನವೀಕರಣ ಕಾರ್ಯ ಕೈಗೊಳ್ಳಲಾಗಿತ್ತು ಎಂದು ಹೇಳಲಾಗಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಪ್ರವಾಸಿಗರಿಗೆ ಮುಕ್ತವಾಗಿದ್ದ ಈ ಸೇತುವೆ ಮುರಿದು ಬಿದ್ದಿರುವುದಕ್ಕೆ ಕಳಪೆ ಕಾಮಗಾರಿ ಕಾರಣ. ಸರ್ಕಾರವು ಮೃತರ ಕುಟುಂಬಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕು. ಈ ಕುರಿತು ಸೂಕ್ತ ತನಿಖೆ ನಡೆಸಬೇಕು. ಈ ನಿರ್ಲಕ್ಷ್ಯದಲ್ಲಿ ರಾಜಕಾರಣಿಗಳ ಪಾತ್ರದ ಕುರಿತೂ ತನಿಖೆಯಾಗಬೇಕು’ ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೇತುವೆ ದುರಂತದ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.
‘ಸೇತುವೆ ದುರಂತದ ಸುದ್ದಿ ತಿಳಿದು ಆಘಾತವಾಗಿದೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಧನಕರ್ ಅವರು ಟ್ವೀಟ್ ಮಾಡಿದ್ದಾರೆ.
‘ಸೇತುವೆ ದುರಂತದ ಸುದ್ದಿ ತಿಳಿದು ತುಂಬಾ ನೋವಾಗಿದೆ. ನದಿ ನೀರಿನಲ್ಲಿ ಸಿಲುಕಿರುವವರು ಸುರಕ್ಷಿತವಾಗಿ ಹೊರಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ರಕ್ಷಣಾ ಕಾರ್ಯಕ್ಕೆ ನೆರವಾಗುವಂತೆ ಸೂಚಿಸಿದ ಖರ್ಗೆ, ರಾಹುಲ್:
ಸೇತುವೆ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
‘ಸೇತುವೆ ದುರಂತದ ಸುದ್ದಿ ತಿಳಿದು ಮನಸ್ಸು ಭಾರವಾಗಿದೆ. ಗುಜರಾತ್‌ನಲ್ಲಿರುವ ಪಕ್ಷದ ಕಾರ್ಯಕರ್ತರು ಅಪಾಯದಲ್ಲಿ ಸಿಲುಕಿರುವವ ರಕ್ಷಣೆಗೆ ಅಗತ್ಯವಿರುವ ಸಹಕಾರ ನೀಡಿ. ಗಾಯಗೊಂಡಿರುವವರ ಚಿಕಿತ್ಸೆಗೂ ನೆರವಾಗಿ’ ಎಂದು ಖರ್ಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
‘ಮೊರ್ಬಿಯಲ್ಲಿ ನಡೆದಿರುವ ದುರಂತದ ಸುದ್ದಿ ತಿಳಿದು ತುಂಬಾ ದುಃಖವಾಗಿದೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.