ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಸ್ಪಷ್ಟ ಕಾರಣ ಇದುವರೆಗೂ ಬಹಿರಂಗವಾಗಿಲ್ಲ.
ಈ ಕುರಿತು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದ್ದಕ್ಕೆ ವಿಜಯ್ ರೂಪಾನಿ‘ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದೆ.
‘ಕೋವಿಡ್ ನಂತರ ಗುಜರಾತ್ ರಾಜ್ಯ ಸಾಕಷ್ಟು ತೊಂದರೆ ಅನುಭವಿಸಿತು, ಆದರೂ ರಾಜ್ಯವನ್ನು ಸಶಕ್ತಗೊಳಿಸಲು ಮುಖ್ಯಮಂತ್ರಿ ರೂಪಾನಿ ಅವರು ಯಾವುದೇ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲಿಲ್ಲ. ಯಾವುದೇ ನಷ್ಟ ಪರಿಹಾರವನ್ನು ಜನಕ್ಕೆ ನೀಡಲಿಲ್ಲ. ಇದರಿಂದ ಅವರನ್ನು ಕಿತ್ತೊಗೆಯಲಾಗಿದೆ. ಸಚಿವ ನಿತಿನ್ ಪಟೇಲ್ ಅವರನ್ನೂ ಕಿತ್ತೊಗೆಯಬೇಕು. ಅವರು ಕೂಡ ಯಾವುದೇ ಕೆಲಸ ಮಾಡಿಲ್ಲ‘ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಭರತ್ ಸೋಲಂಕಿ ಹೇಳಿದ್ದಾರೆ.
‘ಅಲ್ಲದೇ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿರುವುದು, ತಮ್ಮ ವೈಪಲ್ಯಗಳನ್ನು ಮರೆಮಾಚಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಹೈಕಮಾಂಡ್ ಮಾಡುತ್ತಿರುವ ನಾಟಕ‘ ಎಂದು ಸೋಲಂಕಿ ಆರೋಪಿಸಿದ್ದಾರೆ.
ವಿಜಯ್ ರೂಪಾನಿ ರಾಜೀನಾಮೆ:ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶನಿವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸಂಗತಿಯನ್ನು ಘೋಷಿಸಿದರು. ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.ಐದು ವರ್ಷಗಳ ಕಾಲ ರಾಜ್ಯದ ಸೇವೆ ಮಾಡಲು ಪಕ್ಷ ನನಗೆಅವಕಾಶ ನೀಡಲಾಗಿದೆ. ನನ್ನ ಪಕ್ಷ ಏನು ಹೇಳಿದರೂಅದನ್ನು ನಾನು ಮಾಡುತ್ತೇನೆ ಎಂದು ರೂಪಾನಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.