ಬನಾಸ್‌ಕಾಂಠ: ಹನಿ ನೀರಾವರಿ ಮತ್ತು ಸಾವಯವ ಕೃಷಿ ಅಳವಡಿಸಿಕೊಳ್ಳಿ ಎಂದು ಬನಾಸ್‌ಕಾಂಠ ಜಿಲ್ಲೆಯ ಜನೋತ್ರಾ ಹಳ್ಳಿಯ ಜನರಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ಮನವಿ ಮಾಡಿದ್ದಾರೆ.
ಸರ್ಕಾರದ ‘ಹಳ್ಳಿಗೆ ನಡೆಯಿರಿ’ ಅಭಿಯಾನದಡಿ ರಾತ್ರಿ ಹಳ್ಳಿಯಲ್ಲೇ ವಾಸ್ತವ್ಯ ಹೂಡಿದ್ದ ಸಿಎಂ, ಮಾದಕವ್ಯಸನದಿಂದ ದೂರವಿದ್ದು, ಶಿಕ್ಷಣದ ಬಗ್ಗೆ ಗಮನಹರಿಸುವಂತೆ ಯುವಜನತೆಯಲ್ಲಿ ಮನವಿ ಮಾಡಿದರು.
ದೇವಾಲಯದಲ್ಲಿ ಪ್ರಾರ್ಥನೆ ಮತ್ತು ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಹಳ್ಳಿಗೆ ನಡೆಯಿರಿ ಅಭಿಯಾನಕ್ಕೆ ಸಿಎಂ ಶನಿವಾರ ಚಾಲನೆ ನೀಡಿದ್ದರು. ಸರ್ಕಾರ ಎಷ್ಟು ಹುರುಪಿನಲ್ಲಿ ಕೆಲಸ ಮಾಡುತ್ತಿದೆ ಎಂದರೆ ಬಾಕಿ ಇರುವ ಎಲ್ಲ ಕೆಲಸಗಳು ಶೀಘ್ರವೇ ಮುಕ್ತಾಯಗೊಳ್ಳಲಿವೆ ಎಂದು ಹೇಳಿದರು.
ಗ್ರಾಮಸ್ಥ ದಿನೇಶ್ ಬಾಬು ಭಾಟೊಲಾ ಅವರ ನಿವಾಸದಲ್ಲಿ ಕುಟುಂಬದವರ ಜೊತೆ ರಾತ್ರಿ ಭೋಜನ ಸವಿದೆ ಎಂದು ಸಿಎಂ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿ ಮುಂದಾಗಿದೆ. ಹಳ್ಳಿಗೆ ನಡೆಯಿರಿ ಅಭಿಯಾನದಡಿ ಸಚಿವರು ಮತ್ತು ಶಾಸಕರ ಜೊತೆ 56,700 ಮಂದಿ ಪಕ್ಷದ ಕಾರ್ಯಕರ್ತರನ್ನು ರಾಜ್ಯದಾದ್ಯಂತ ನಿಯೋಜಿಸಲಾಗಿದೆ. ರೈತರು, ಯುವಕರು, ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರನ್ನು ಭೇಟಿಯಾದ ಸಿಎಂ, ಸರ್ಕಾರದ ಯೋಜನೆಗಳ ಬಗ್ಗೆ ಚರ್ಚಿಸಿದರು ಎಂದು ಪ್ರಕಟಣೆ ತಿಳಿಸಿದೆ
ಇದೇವೇಳೆ, 125 ಹಳ್ಳಿಗಳಿಗೆ ನೆರವಾಗುವ ನೀರಾವರಿ ಯೋಜನೆಗೆ ₹862 ಕೋಟಿ ಮಂಜೂರು ಮಾಡಿದ ಸಿಎಂಗೆ ಗ್ರಾಮಸ್ಥರು ಧನ್ಯವಾದ ಅರ್ಪಿಸಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಎಲ್ಲ 26 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.