ಬೆಂಗಳೂರು: ಇತ್ತೀಚೆಗೆ ತಮ್ಮದೇ ಪಕ್ಷದ ಕಾರ್ಯವೈಖರಿ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಗುಜರಾತ್ ಕಾಂಗ್ರೆಸ್ ಘಟಕದ ನಾಯಕ ಹಾರ್ದಿಕ್ ಪಟೇಲ್ ಅವರು, ಈಗ ತಮ್ಮ ಟ್ವಿಟರ್ ಖಾತೆಯ ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ಪಕ್ಷದ ಹೆಸರನ್ನು ತೆಗೆದು ಹಾಕಿದ್ದಾರೆ. ಈ ಮೂಲಕ ಅವರು ಗುಜರಾತ್ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣರಾಗಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಹಾರ್ದಿಕ್ ಪಟೇಲ್, ‘ನನಗೆ ತುಂಬಾ ಕಿರುಕುಳ ನೀಡಲಾಗುತ್ತಿದೆ. ಅದರ ಬಗ್ಗೆ ನನಗೆ ಬೇಸರವಿದೆ. ಗುಜರಾತ್ ಕಾಂಗ್ರೆಸ್ ನಾಯಕರು ನಾನು ಪಕ್ಷದಿಂದ ಹೊರಹೋಗಬೇಕೆಂದು ಬಯಸುತ್ತಿದ್ದಾರೆ’ ಎಂದು ಅರೋಪಿಸಿದ್ದರು.
ಇದಾದ ಕೆಲವೇ ದಿನಗಳಲ್ಲಿ ಅವರು ಬಿಜೆಪಿಯನ್ನು ಹೊಗಳಲಾರಂಭಿಸಿದ್ದರು. ಬಿಜೆಪಿಯ ನಿರ್ಣಯ ಕೈಗೊಳ್ಳುವ ಸಾಮರ್ಥ್ಯದ ಬಗ್ಗೆ ಹಾಡಿ ಹೊಗಳಿದ್ದರು. ಹೀಗಾಗಿ ಅವರು ಬಿಜೆಪಿ ಸೇರಬಹುದು ಎಂದು ಹೇಳಲಾಗಿತ್ತು.
ಇದೀಗ, ತಮ್ಮ ಟ್ವಿಟರ್ ಖಾತೆಯ ಮಾಹಿತಿ ವಿಭಾಗದಲ್ಲಿ ಕಾಂಗ್ರೆಸ್ ಪಕ್ಷದ ಹೆಸರನ್ನೇ ತೆಗೆದು ಹಾಕಿದ್ದಾರೆ. ಪಕ್ಷದಲ್ಲಿ ತಾವು ಹೊಂದಿರುವ ಹುದ್ದೆಯ ಬಗ್ಗೆ ಇದ್ದ ಉಲ್ಲೇಖವನ್ನು ಅಳಿಸಿದ್ದಾರೆ. ಇದರೊಂದಿಗೆ, ಪಟೇಲ್ ಬಿಜೆಪಿ ಸೇರುವ ಅನುಮಾನಗಳು ಬಲಗೊಂಡಿವೆ.
‘ಭಾರತದ ಹೆಮ್ಮೆಯ ದೇಶಭಕ್ತ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ, ಉತ್ತಮ ಭಾರತಕ್ಕಾಗಿ ಬದ್ಧ’ ಎಂದು ಅವರು ಸದ್ಯ ತಮ್ಮ ಟ್ವಿಟರ್‌ನ ‘ಬಯೋ‘ದಲ್ಲಿ ಬರೆದುಕೊಂಡಿದ್ದಾರೆ.
2015ರಲ್ಲಿ ಪಾಟೀದಾರ್ ಮೀಸಲಾತಿ ಹೋರಾಟದ ಮೂಲಕ ಗುಜರಾತ್ ರಾಜಕೀಯದಲ್ಲಿ ಮುಂಚೂಣಿಗೆ ಬಂದ ಹಾರ್ದಿಕ್ ಪಟೇಲ್ ಅವರನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ 2020ರ ಜುಲೈನಲ್ಲಿ ನೇಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.