ಅಹಮದಾಬಾದ್: 2016ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ ಹಾಗೂ ಇತರ 18 ಮಂದಿಗೆ ಅಲಹಾಬಾದ್ ನ್ಯಾಯಾಲಯ ಶುಕ್ರವಾರ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಶಾಸಕರೂ ಆಗಿರುವ ಮೇವಾನಿ ಹಾಗೂ ಅವರ ಬೆಂಬಲಿಗರು ನಡೆಸಿದ ರಸ್ತೆ ತಡೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆ ವಿಧಿಸಲಾಗಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ.ಎನ್.ಗೋಸ್ವಾಮಿ ಅವರು ಮೇವಾನಿ ಮತ್ತು ಇತರರಿಗೆ ದಂಡವನ್ನೂ ವಿಧಿಸಿದ್ದಾರೆ. ಜೊತೆಗೆ ಶಿಕ್ಷೆ ಜಾರಿಯನ್ನು ಅಕ್ಟೋಬರ್ 17ರ ವರೆಗೆ ತಡೆಹಿಡಿಯಲಾಗಿದ್ದು, ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಗುಜರಾತ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರು ಇಡುವಂತೆ ಒತ್ತಾಯಿಸುವ ಸಲುವಾಗಿ ಮೇವಾನಿ ಹಾಗೂ ಇತರ 19 ಮಂದಿ ರಸ್ತೆ ತಡೆ ನಡೆಸಿದ್ದರು.
ಈ ಸಂಬಂಧಇಲ್ಲಿನ ವಿಶ್ವವಿದ್ಯಾಲಯ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 (ನಿಯಮ ಬಾಹಿರ ಗುಂಪುಗಾರಿಕೆ), ಸೆಕ್ಷನ್ 147 (ಗಲಭೆ)ಮತ್ತು ಗುಜರಾತ್ ಪೊಲೀಸ್ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ಅವಧಿಯಲ್ಲಿ ಆರೋಪಿಯೊಬ್ಬರು ಮೃತಪಟ್ಟಿದ್ದಾರೆ.
ಪ್ರಮುಖ ದಲಿತ ನಾಯಕ ಆಗಿರುವ ಮೇವಾನಿ 2017ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ,ಕಾಂಗ್ರೆಸ್ ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದರು.
ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿವಿಧಾನಸಭೆ ಚುನಾವಣೆ ಚುನಾವಣೆ ನಡೆಯಲಿದೆ.
ಮೆವಾನಿ ಪ್ರತಿಕ್ರಿಯೆ:ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಮೆವಾನಿ, ಗುಜರಾತ್ ಸರ್ಕಾರವು ಎಲ್ಲಾ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದೆ. ಅವರನ್ನು ಅಭಿನಂದಿಸಿ, ಅವರು ಉತ್ತಮ ನಡತೆಯುಳ್ಳವರೆಂದೂ ಹೇಳಿದೆ. ಗುಜರಾತಿನ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರ ವಿರುದ್ಧ ಸುಮಾರು 108 ಪ್ರಕರಣಗಳಿವೆ. ಆದರೆ, ಯಾವುದರಲ್ಲೂ ಶಿಕ್ಷೆಯಾಗಿಲ್ಲ. ಕಟ್ಟಡವೊಂದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿಡಬೇಕೆಂದು ರ‍್ಯಾಲಿ ನಡೆಸಿದ ಮಾತ್ರಕ್ಕೆ ಆರು ತಿಂಗಳ ಜೈಲುಶಿಕ್ಷೆ ವಿಧಿಸಲಾಗುತ್ತಿದೆ. ಇದು ಹೋರಾಟಗಾರರ ವಿರುದ್ಧ ದಾಖಲಾಗುತ್ತಿರುವ ಎರಡನೇ ಪ್ರಕರಣ. ನಾವು ಈ ತೀರ್ಪನ್ನು ಸ್ವಾಗತಿಸುತ್ತೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.