ಶ್ರೀನಗರ: ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿ(ಪಿಎಂಒ) ಎಂದು ಹೇಳಿಕೊಂಡು ಜಮ್ಮು ಮತ್ತು ಕಾಶ್ಮೀರದ ಆಡಳಿತ ವ್ಯವಸ್ಥೆಯನ್ನೇ ಯಾಮಾರಿಸಿ ಝಡ್ ಪ್ಲಸ್ ಭದ್ರತೆ ಪಡೆದಿದ್ದ ಭೂಪನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಕಿರಣ್ ಭಾಯ್ ಪಟೇಲ್ ಬಂಧಿತ ಆರೋಪಿ. ಈತನನ್ನು ಕಾಶ್ಮೀರ ಪೊಲೀಸರು ಮಾ.2ರಂದು ಬಂಧಿಸಿದ್ದು, ಮಾ.16ರಂದು ನ್ಯಾಯಾಲಯದ ವಿಚಾರಣೆ ವೇಳೆ ಬಂಧನದ ವಿಷಯ ಬಹಿರಂಗಗೊಂಡಿದೆ.
ಈತ ಪಿಎಂಒ ಹೆಚ್ಚುವರಿ ನಿರ್ದೇಶಕ ಎಂದು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿದ್ದ. ಝಡ್ ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಎಸ್‌ಯುವಿ ಸೌಲಭ್ಯಗಳನ್ನು ಹೊಂದಿದ್ದ ಈತ ಗುಜರಾತ್‌ನ ಇತರ ಮೂವರೊಂದಿಗೆ ಶ್ರೀನಗರ ಪಂಚತಾರ ಹೊಟೇಲ್‌ನಲ್ಲಿ ತಂಗಿದ್ದ ಎಂದು ಮೂಲಗಳು ಹೇಳಿವೆ.
ಕಳೆದ ವರ್ಷ ಅಕ್ಟೋಬರ್‌ನಿಂದ ಪಿಎಂಒ ತಂಡ ಕಾಶ್ಮೀರಕ್ಕೆ ಭೇಟಿ ನೀಡುತ್ತಿದೆ. ಜಮ್ಮು ಮತ್ತು ಕಾಶ್ಮೀರ ಸಿಐಡಿ ನೀಡಿದ ಸುಳಿವಿನ ಮೇರೆಗೆ ಮಾರ್ಚ್ 2 ರಂದು ಆರೋಪಿಯನ್ನು ಬಂಧಿಸಲಾಗಿದೆ. ಬಂಧನಕ್ಕೆ ಒಂದು ಗಂಟೆ ಮೊದಲು ಆತನ ಮೂವರು ಸಹಚರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಪಟೇಲ್, ಬುದ್ಗಾಮ್ ಜಿಲ್ಲೆಗೆ ಅಧಿಕೃತ ಪ್ರವಾಸಕ್ಕೆ ತನ್ನೊಂದಿಗೆ ಬರಲು ಹಿರಿಯ ಅಧಿಕಾರಿಯನ್ನು ಆಹ್ವಾನಿಸಿದ್ದಾನೆ. ಆಗ ಆತನ ಮೇಲೆ ಅನುಮಾನ ಬಂದಿದೆ ಎಂದು ಮೂಲಗಳು ಹೇಳಿವೆ.
ದಕ್ಷಿಣ ಕಾಶ್ಮೀರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಐಎಎಸ್ ಅಧಿಕಾರಿಯೊಬ್ಬರು ಹಿರಿಯ ಪಿಎಂಒ ಅಧಿಕಾರಿ ಭೇಟಿಯ ಬಗ್ಗೆ ಆರಂಭದಲ್ಲಿ ಪೊಲೀಸರ ಭದ್ರತಾ ವಿಭಾಗಕ್ಕೆ ಮಾಹಿತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಭದ್ರತಾ ವಿಭಾಗದಿಂದ ಈತನಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಯಿತು ಮತ್ತು ಅಕ್ಟೋಬರ್‌ನಿಂದ ನಾಲ್ಕು ಸಲ ಪ್ರವಾಸ ನಡೆಸಿದ್ದು, ಆತನ ಜತೆಗೆ ಸ್ಥಳೀಯ ಪೊಲೀಸರಿದ್ದರು ಎಂದು ಮೂಲಗಳು ಹೇಳಿವೆ.
ಈತ ಸ್ಥಳೀಯ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾನೆ. ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಜಾಗಗಳಿಗೆ ಭೇಟಿ ನೀಡಿ, ಅಲ್ಲಿನ ಚಿತ್ರಗಳನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ. ಈತನಿಗೆ ಟ್ವಿಟರ್‌ನಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸಾವಿರಾರು ಜನ ಅನುಯಾಯಿಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.