ಗೋಧ್ರಾ: 2002ರ ಗುಜರಾತ್ ಕೋಮುಗಲಭೆಯ ವೇಳೆ ಕಲೋಲ್ ಎಂಬಲ್ಲಿ ನಡೆದಿದ್ದ ಅಲ್ಪಸಂಖ್ಯಾತರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ 26 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಗುಜರಾತ್‌ನ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.
ಪಂಚಮಹಲ್ ಜಿಲ್ಲೆಯ ಕಲೋಲ್‌ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಲೀಲಾಭಾಯಿ ಚುಡಾಸಮಾ ಅವರು ಆರೋಪಿಗಳನ್ನು ಖುಲಾಸೆ ಮಾಡಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ 39 ಆರೋಪಿಗಳ ಪೈಕಿ 13 ಮಂದಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಮೃತಪಟ್ಟಿದ್ದರು. ಅವರ ವಿರುದ್ಧದ ವಿಚಾರಣೆಯನ್ನು ಈ ಹಿಂದೆಯೇ ರದ್ದುಗೊಳಿಸಲಾಗಿತ್ತು.
2002ರ ಫೆಬ್ರುವರಿ 27 ರಂದು ಗೋಧ್ರಾದಲ್ಲಿ ಸಾಬರಮತಿ ರೈಲನ್ನು ಸುಟ್ಟುಹಾಕಲಾಗಿತ್ತು. ಮಾರ್ಚ್ 1, ರಂದು ಕೋಮು ಗಲಭೆ ಭುಗಿಲೆದ್ದು, ಹಿಂಸಾಚಾರಗಳು ಸಂಭವಿಸಿದ್ದವು. ಸದ್ಯ ಖುಲಾಸೆಗೊಂಡಿರುವ ಈ 26 ಆರೋಪಿಗಳೂ ಗಲಭೆಯ ಭಾಗವಾಗಿದ್ದರು.
2002 ಮಾರ್ಚ್ 2 ರಂದು ಕಲೋಲ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಾಸಿಕ್ಯೂಷನ್ 190 ಸಾಕ್ಷಿಗಳು ಮತ್ತು 334 ಸಾಕ್ಷ್ಯಗಳನ್ನು ಪರಿಶೀಲಿಸಿತ್ತು. ಆದರೆ ನ್ಯಾಯಾಲಯವು ಸಾಕ್ಷಿಗಳಲ್ಲಿ ವಿರೋಧಾಭಾಸಗಳಿವೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಪ್ರಾಸಿಕ್ಯೂಷನ್ ವಾದವನ್ನು ಕೋರ್ಟ್ ತಳ್ಳಿಹಾಕಿದೆ.
ಗಾಂಧಿನಗರ ಜಿಲ್ಲೆಯ ಕಲೋಲ್ ನಗರದಲ್ಲಿ 2002ರ ಮಾರ್ಚ್ 1ರಂದು ಸಂಭವಿಸಿದ್ದ ಕೋಮು ಗಲಭೆಯಲ್ಲಿ ಸುಮಾರು 2,000ಕ್ಕೂ ಹೆಚ್ಚು ಮಂದಿ ಹರಿತವಾದ ಆಯುಧಗಳ ಮೂಲಕ ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದರು. ಹಲವು ಅಂಗಡಿಗಳನ್ನು ಧ್ವಂಸ ಮಾಡಿದ್ದರು.
ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆತನನ್ನು ಟೆಂಪೋ ಸಹಿತ ಸುಟ್ಟು ಹಾಕಲಾಗಿತ್ತು.
ಮಸೀದಿಯಿಂದ ಹೊರಗೆ ಬರುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದ ಗುಂಪು, ಆತನನ್ನು ಕೊಂದು, ದೇಹವನ್ನು ಮಸೀದಿಯೊಳಗೆ ಸುಟ್ಟು ಹಾಕಿತ್ತು. ಮತ್ತೊಂದು ಘಟನೆಯಲ್ಲಿ ಗುಂಪೊಂದು 38 ಜನರ ಮೇಲೆ ದಾಳಿ ನಡೆಸಿತ್ತು. ಈ ಪೈಕಿ 11 ಜನರನ್ನು ಜೀವಂತವಿರುವಾಗಲೇ ಸುಟ್ಟುಹಾಕಲಾಗಿತ್ತು.
ಘಟನೆ ನಡೆಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಳೆಯೊಬ್ಬರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.