ADVERTISEMENT

ಗುಜರಾತ್‌: ಹೊಸ ಬಟ್ಟೆ, ಸನ್‌ಗ್ಲಾಸ್‌ ಧರಿಸಿದ್ದಕ್ಕೆ ದಲಿತ ವ್ಯಕ್ತಿಗೆ ಥಳಿತ

ಪಿಟಿಐ
Published 1 ಜೂನ್ 2023, 14:24 IST
Last Updated 1 ಜೂನ್ 2023, 14:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಾಲನಪುರ: ಹೊಸ ಬಟ್ಟೆ, ಸನ್‌ಗ್ಲಾಸ್‌ ಹಾಕಿದನೆಂಬ ಕಾರಣಕ್ಕೆ ದಲಿತ ವ್ಯಕ್ತಿಗೆ ಮೇಲ್ವರ್ಗದ ಗುಂಪೊಂದು ಥಳಿಸಿದ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್ಪುರ್‌ ತಾಲ್ಲೂಕಿನ ಮೋಟಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೋಟಾ ಗ್ರಾಮದ ಜೆಗರ್ ಶೆಖಾಲಿಯಾ ಥಳಿತಕ್ಕೋಳಗಾದವರು. ಶೆಖಾಲಿಯಾ ನೀಡಿದ ದೂರಿನ ಆಧಾರದ ಮೇಲೆ ರಜಪೂತ ಸಮುದಾಯಕ್ಕೆ ಸೇರಿದ ಏಳು ಆರೋಪಿಗಳ ಮೇಲೆ ಗಧ್‌ ಪೊಲೀಸ್‌ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಹಲ್ಲೆಗೊಳಗಾದ ಶೆಖಾಲಿಯಾ ಹಾಗೂ ಆತನ ತಾಯಿಯನ್ನು ಆಸ್ಟತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಹೊಸ ಬಟ್ಟೆ, ಸನ್‌ಗ್ಲಾಸ್‌ ಹಾಕಿದ ವಿಚಾರಕ್ಕೆ ಸಂಬಂಧ‍‍ಪಟ್ಟಂತೆ ಮಂಗಳವಾರ ಬೆಳಿಗ್ಗೆ ಮನೆಯ ಹೊರಗೆ ನಿಂತಿರುವ ವೇಳೆ ವ್ಯಕ್ತಿಯೊಬ್ಬ(ಏಳು ಆರೋಪಿಗಳಲ್ಲಿ ಒಬ್ಬ) ನನ್ನ ಬಳಿ ಬಂದು ಜೀವ ಬೆದರಿಕೆ ಹಾಕಿದ್ದನು. ಇತ್ತೀಚಿನ ದಿನಗಳಲ್ಲಿ ನಿನ್ನದು ಅತಿಯಾಯಿತು ಎಂದು ಹೇಳಿದ್ದನು‘ ಎಂದು ಶೆಖಾಲಿಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಅದೇ ದಿನ ರಾತ್ರಿ ದೇವಸ್ಥಾನದ ಹೊರಗೆ ನಿಂತಿರುವಾಗ ಆರು ಜನರು ನೇರವಾಗಿ ನನ್ನ ಬಳಿ ಬಂದು ಕೋಲುಗಳಿಂದ ಹೊಡೆದಿದ್ದಾರೆ. ಹೊಸ ಬಟ್ಟೆ, ಸನ್‌ಗ್ಲಾಸ್‌ ಧರಿಸುತ್ತಿಯಾ? ಎಂದು ಕೇಳಿದ್ದಾರೆ. ನನ್ನ ರಕ್ಷಣೆಗೆ ಬಂದ ನನ್ನ ತಾಯಿ ಮೇಲೂ ಹಲ್ಲೆ ನಡೆಸಿದ್ದಾರೆ. ಅವಳ ಸೀರೆ ಎಳೆದು ಹರಿದಿದ್ದಾರೆ. ಅವಳಿಗೂ ಜೀವ ಬೆದರಿಕೆ ಒಡ್ಡಿದ್ದಾರೆ‘ ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ಏಳು ಆರೋಪಿಗಳ ವಿರುದ್ಧ ಗಲಭೆ, ಮಹಿಳೆಯ ಮೇಲೆ ದೌರ್ಜನ್ಯ, ಜಾತಿ ನಿಂದನೆ ಹೀಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲೂ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಳು ಆರೋಪಿಗಳಲ್ಲಿ ಯಾರೊಬ್ಬರನ್ನು ಇದುವರೆಗೂ ಬಂಧಿಸಲಾಗಿಲ್ಲ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.