ಅಹಮದಾಬಾದ್ (ಪಿಟಿಐ): ಗಲಭೆಕೋರರಿಗೆ ಬಿಜೆಪಿ ತಕ್ಕ ಪಾಠ ಕಲಿಸಿದೆ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಅಧಿಕಾರ ಶಾಶ್ವತವಲ್ಲ ಎಂದಿದ್ದಾರೆ. ಅಮಿತ್ ಶಾ ಅವರಿಗೆ ಅಧಿಕಾರದ ಅಮಲೇರಿದೆ ಎಂದೂ ದೂರಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಶುಕ್ರವಾರ ಮಾತನಾಡಿದ್ದ ಶಾ, ‘ಹಿಂಸೆಯಲ್ಲಿ ತೊಡಗಿದ್ದ ಸಮಾಜ ವಿರೋಧಿ ಶಕ್ತಿಗಳಿಗೆ 2002ರಲ್ಲಿ ನಾವು ತಕ್ಕ ಉತ್ತರ ನೀಡಿದ್ದರಿಂದ, ಆ ಬಳಿಕ ಗುಜರಾತ್‌ನಲ್ಲಿ ಹಿಂಸಾಚಾರದ ಪ್ರಕರಣಗಳು ನಿಂತುಹೋದವು. ಗುಜರಾತ್‌ನಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಿತು’ ಎಂದು ಹೇಳಿದ್ದರು.
ಮುಸ್ಲಿಂ ಸಮುದಾಯದ ಪ್ರಾಬಲ್ಯವಿರುವ ಅಹಮದಾಬಾದ್‌ನ ಜುಹಾನ್‌ಪುರದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಒವೈಸಿ, ‘ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಕೊಲೆ ಆರೋಪದಲ್ಲಿ ಜೈಲಿನಲ್ಲಿದ್ದ ಅಪರಾಧಿಗಳ ಬಿಡುಗಡೆಯ ಪಾಠವನ್ನೂ ಶಾ ಮಾಡಿದ್ದಾರೆ’ ಎಂದು ಟೀಕಿಸಿದ್ದಾರೆ.
‘2002ರಲ್ಲಿ ನೀವು ಕಲಿಸಿದ ಪಾಠದ ಜೊತೆಗೆ, ಬಿಲ್ಕಿಸ್ ಬಾನು ಪ್ರಕರಣದ ಅತ್ಯಾಚಾರಿಗಳ ಬಿಡುಗಡೆಯ ಪಾಠ; ಬಿಲ್ಕಿಸ್ ಬಾನು ಎದುರಿಗೆ ಆಕೆಯ ಮೂರು ವರ್ಷದ ಮಗುವಿನ ಹತ್ಯೆ ಮಾಡಿದ ಹಂತಕರ ಬಿಡುಗಡೆಯ ಪಾಠ; ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಹತ್ಯೆಯ ಪಾಠ; ಗುಲ್ಬರ್ಗ್ ಸೊಸೈಟಿ ಮತ್ತು ಬೆಸ್ಟ್ ಬೇಕರಿ ಪ್ರಕರಣಗಳಲ್ಲೂ ಪಾಠ ಕಲಿಸಿದ್ದೀರಿ’ ಎಂದು ಒವೈಸಿ ಹೇಳಿದ್ದಾರೆ. ಜಾಫ್ರಿ ಸೇರಿದಂತೆ ಮುಸ್ಲಿಮರ ಹತ್ಯೆಗೆ ಕಾರಣವಾದ ಗೋಧ್ರೋತ್ತರ ಘಟನೆಗಳನ್ನು ಒವೈಸಿ ಅವರು ಪ್ರಸ್ತಾಪಿಸಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಗುಜರಾತ್ ಸರ್ಕಾರ ಇದೇ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.