ಅಹಮದಾಬಾದ್: ಜಿಲ್ಲೆಯ ಗಿರ್ ಸೋಮನಾಥ್ ಜಿಲ್ಲೆಯ ರೈತರೊಬ್ಬರ ಮನೆಯಲ್ಲಿ ಐವಿಎಫ್ ತಂತ್ರಜ್ಞಾನದಡಿ ಗರ್ಭ ಧರಿಸಿದ್ದ ‘ಬನ್ನಿ’ ತಳಿಯ ಎಮ್ಮೆ ಗಂಡು ಕರುವಿಗೆ ಜನ್ಮನೀಡಿದೆ.
ಈ ತಳಿಯ ಎಮ್ಮೆಗಳು ಗುಜರಾತ್‌ನ ಕುಛ್ ಪ್ರಾಂತ್ಯದಲ್ಲಿ ಹೆಚ್ಚು ಕಂಡುಬರಲಿವೆ. ಹಾಲಿನ ಉತ್ಪಾದನೆ ವೃದ್ಧಿಗೆ, ಗುಣಮಟ್ಟದ ತಳಿಯ ಎಮ್ಮೆಗಳ ಸಂತತಿ ಹೆಚ್ಚಿಸಲು ಐವಿಎಫ್ ತಂತ್ರಜ್ಞಾನದ ಮೊರೆ ಹೋಗಲಾಗಿತ್ತು.
‘ಬನ್ನಿ’ ತಳಿಯ ಎಮ್ಮೆಗಳು ಸ್ಥಿತಿಸ್ಥಾಪಕತ್ವ, ಹೆಚ್ಚಿನ ಹಾಲು ಉತ್ಪಾದನೆಗೆ ಹೆಸರಾಗಿವೆ. ಇದು, ಐವಿಎಫ್ ಕ್ರಮದಲ್ಲಿ ಜನಿಸಿದ ಮೊದಲ ಕರು ಎಂದು ಕೇಂದ್ರ ಪಶುಸಂಗೋಪನೆ, ಮೀನುಗಾರಿಕೆ ಸಚಿವಾಲಯ ಟ್ವೀಟ್ ಮಾಡಿದೆ.
ಬನ್ನಿ ತಳಿ ಎಮ್ಮೆ ಐವಿಎಫ್ ತಂತ್ರಜ್ಞಾನದಲ್ಲಿ ಗರ್ಭಧರಿಸಿ ಕರುವಿಗೆ ಜನ್ಮ ನೀಡಿದ ಮೊದಲ ಪ್ರಕರಣ ಇದಾಗಿದೆ. ಕೃಷಿಕ ವಿನಯ್ ಎಲ್ ವಾಲಾ ಅವರ ಕೊಟ್ಟಿಗೆಯಲ್ಲಿಯೇ ಕರು ಜನಿಸಿತು ಎಂದು ಟ್ವೀಟ್‌ನಲ್ಲಿ ತಿಳಿಸಿದೆ.
ಎಮ್ಮೆಗೆ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಧಾರಣೆಗೆ ನೆರವಾಗುವ ಕ್ರಮವನ್ನು ಸ್ಥಳೀಯ ಎನ್‌ಜಿಒ ಜೆಕೆ ಟ್ರಸ್ಟ್ ಕೈಗೊಂಡಿತ್ತು. ಇನ್ನು ಕೆಲ ಎಮ್ಮೆಗಳಿಗೆ ಇದೇ ಕ್ರಮ ಅನುಸರಿಸಿದ್ದು, ಮುಂದಿನ ದಿನಗಳಲ್ಲಿ ಕರುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ ಎಂದು ಕೃಷಿಕ ವಿನಯ್ ವಾಲಾ ತಿಳಿಸಿದರು.
‘ಬನ್ನಿ ಮತ್ತು ಮುರ್‍ರಾ ತಳಿಗಳು ಹೆಚ್ಚು ಹಾಲು ನೀಡುತ್ತವೆ. ನನ್ನ ಬಳಿ ಎಂಟು ಬನ್ನಿ ತಳಿಯ ಎಮ್ಮೆಗಳಿವೆ. ಕಡಿಮೆ ಮೇವು ಸೇವಿಸಿಯೂ ನಿಯಮಿತವಾಗಿ 9–12 ಲೀಟರ್ ಹಾಲು ನೀಡುತ್ತಿವೆ. ಐವಿಎಫ್ ತಂತ್ರಜ್ಞಾನವು ವರದಾನವಾಗಿದ್ದು, ಇದು ನಿರ್ದಿಷ್ಟ ತಳಿಯ ಜಾನುವಾರುಗಳನ್ನು ತ್ವರಿತವಾಗಿ ಹೆಚ್ಚಿಸಲು ನೆರವಾಗಲಿದೆ’ ಎಂದರು.
ಎನ್‌ಜಿಒ ಜೆ.ಕೆ.ಟ್ರಸ್ಟ್ ಗುಜರಾತ್‌ನಲ್ಲಿ ಐವಿಎಫ್ ತಂತ್ರಜ್ಞಾನ ಬಳಸಿ ಮೂಲಕ ಒಟ್ಟು 125 ಗರ್ಭಧಾರಣೆಯನ್ನು ಮುಂದಿನ ಎರಡು ತಿಂಗಳಲ್ಲಿ 100 ರಾಸುಗಳಿಗೆ ಗರ್ಭಧಾರಣೆ ನಡೆಸಲು ಉದ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.