ADVERTISEMENT

ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನ: ಅಳಿವಿನಂಚಿನ ಸಿಂಹಗಳ ಸಾವು ನಿರಂತರ!

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 19:44 IST
Last Updated 3 ಅಕ್ಟೋಬರ್ 2018, 19:44 IST
   

ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಸೆಪ್ಟೆಂಬರ್ 11ರಿಂದ ಅಕ್ಟೋಬರ್ 3ರವರೆಗೆ 23 ಸಿಂಹಗಳು ಮೃತಪಟ್ಟಿವೆ. ಪರಸ್ಪರ ಕಾದಾಟದಿಂದ ಇವು ಮೃತಪಟ್ಟಿವೆ ಎಂದು ಆರಂಭದಲ್ಲಿ ಅರಣ್ಯ ಇಲಾಖೆ ಹೇಳಿತ್ತು. ಆದರೆ ಈಗ ಎರಡು ಭಿನ್ನ ವೈರಸ್‌ಗಳಿಗೆ ಈ ಸಿಂಹಗಳು ತುತ್ತಾಗಿರುವುದು ಪತ್ತೆಯಾಗಿದೆ. ವಿಶ್ವದಲ್ಲಿ ಏಷಿಯಾಟಿಕ್ ಸಿಂಹಗಳ ಏಕೈಕ ನೈಸರ್ಗಿಕ ಆವಾಸವಾದ ಗಿರ್‌ನಲ್ಲಿ ಉಳಿದಿರುವ ಸಿಂಹಗಳನ್ನು ಉಳಿಸಿಕೊಳ್ಳಲು ಗುಜರಾತ್ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಮಧ್ಯೆಯೂ ಸಿಂಹಗಳು ಮೃತಪಡುತ್ತಲೇ ಇವೆ.

20ರಿಂದ 523ಕ್ಕೆ...
​ಗಿರ್ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವು 1965ರಲ್ಲಿ ರಚನೆಯಾಯಿತು. ಗುಜರಾತ್‌ನ ಜುನಾಗಡ ಜಿಲ್ಲೆಯ ದಕ್ಷಿಣದಲ್ಲಿದ್ದ ಸಸನ್ ಗಿರ್ ಹುಲ್ಲುಗಾವಲು ಪ್ರದೇಶದಲ್ಲಿ ಈ ಅಭಯಾರಣ್ಯದ ಎಲ್ಲೆಗಳನ್ನು ಗುರುತಿಸಲಾಯಿತು. 1913ರಲ್ಲಿ ಈ ಪ್ರದೇಶದಲ್ಲಿ ಕೇವಲ 20 ಸಿಂಹಗಳಷ್ಟೇ ಉಳಿದಿದ್ದವು. ಈಗ ಅವುಗಳ ಸಂಖ್ಯೆ 520ರ ಆಸುಪಾಸಿನಲ್ಲಿದೆ

**
ಗುಜರಾತ್ ಗಿರ್ ರಾಷ್ಟ್ರೀಯ ಉದ್ಯಾನ
* ಮೀಸಲು ಪ್ರದೇಶ
* ಅರಣ್ಯ ಕೇಂದ್ರ
*ವೈರಸ್ ದಾಳಿ ಪತ್ತೆಯಾಗಿರುವ ದಲ್ಖನಿಯಾ ಮತ್ತು ಸರಸಿಯಾ ವಲಯ

*
1,412 ಚದರ ಕಿ.ಮೀ.– ರಾಷ್ಟ್ರೀಯ ಉದ್ಯಾನದ ಒಟ್ಟು ವಿಸ್ತೀರ್ಣ
258 ಚದರ ಕಿ.ಮೀ. – ಅರಣ್ಯ ಕೇಂದ್ರದ ವಿಸ್ತೀರ್ಣ
523 – 2015ರ ಗಣತಿಯಲ್ಲಿ ಪತ್ತೆಯಾಗಿದ್ದ ಸಿಂಹಗಳು
109 – ಸಿಂಹಗಳು
201 – ಸಿಂಹಿಣಿಗಳು
73– ಬಾಲ್ಯಾವಸ್ಥೆ ದಾಟಿದ ಸಿಂಹಗಳು
140 – ಮರಿಗಳು‌

ಸರ್ಕಾರದ ಹಟಕ್ಕೆ ಸಿಂಹ ಬಲಿಯೇ?
ಗಿರ್ ಅರಣ್ಯದಲ್ಲಿ ಮಾತ್ರ ಇರುವ ಏಷಿಯಾಟಿಕ್ ಸಿಂಹಗಳನ್ನು ಮಧ್ಯಪ್ರದೇಶದ ಕುನೊ ಅಭಯಾರಣ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು 1994ರಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಯೋಜನೆಯೊಂದನ್ನು ಸಿದ್ಧಪಡಿಸಿತ್ತು.‌

ಏಷಿಯಾಟಿಕ್ ಸಿಂಹಗಳು ವಿಶ್ವದ ಇತರೆಡೆ ಇದ್ದ ತಮ್ಮ ನೈಸರ್ಗಿಕ ಆವಾಸ ಸ್ಥಾನಗಳಾದ ಟರ್ಕಿ ಮತ್ತು ಮಧ್ಯಪ್ರಾಚ್ಯದ ಅರಣ್ಯಪ್ರದೇಶಗಳಲ್ಲಿ ಸಂಪೂರ್ಣ ನಾಮಾವಶೇಷವಾಗಿವೆ. ಈಗ ಗಿರ್ ಅರಣ್ಯದಲ್ಲಿ ಮಾತ್ರ ಅವು ಉಳಿದಿವೆ. ಒಂದೊಮ್ಮೆ ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗಗಳಿಗೆ ಈ ಸಿಂಹಗಳು ಬಲಿಯಾದರೆ ಭೂಮಿಯಿಂದಲೇ ಅವು ನಿರ್ನಾಮವಾಗಲಿವೆ. ಹೀಗಾಗಿ ಮತ್ತೊಂದು ಅಭಯಾರಣ್ಯವನ್ನು ಅಭಿವೃದ್ಧಿಪಡಿಸಿ ಕೆಲವು ಸಿಂಹಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕು. ಆಗ ಎರಡರಲ್ಲಿ ಒಂದು ಅರಣ್ಯದಲ್ಲಿ ಸಿಂಹಗಳು ನಾಶವಾದರೂ, ಮತ್ತೊಂದರಲ್ಲಿ ಉಳಿಯಲಿವೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿತ್ತು.

ADVERTISEMENT

ಆದರೆ ಈ ಯೋಜನೆಗೆ ಗುಜರಾತ್ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ‘ಗುಜರಾತ್‌ಗೆ ಸೀಮಿತವಾಗಿರುವ ಏಷಿಯಾಟಿಕ್ ಸಿಂಹಗಳು ರಾಜ್ಯದ ಮುಕುಟಮಣಿ. ಅವುಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ’ ಎಂಬ ವಾದವನ್ನು ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರವೂ ಮುಂದುವರಿಸಿತು. ಅಲ್ಲದೆ ಕೇಂದ್ರ ಮತ್ತು ಗುಜರಾತ್ ಸರ್ಕಾರಗಳ ನಡುವಣ ಈ ಜಟಾಪಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.2013ರ ಅಕ್ಟೋಬರ್ ಅಂತ್ಯದೊಳಗೆ ಕೆಲವು ಸಿಂಹಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಲೇಬೇಕು ಎಂದು ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಆದರೆ ರಾಜ್ಯ ಸರ್ಕಾರ ಆ ಸೂಚನೆಯನ್ನು ಕಡೆಗಣಿಸಿತು.

ಆಗ ಪರಿಸರವಾದಿ ಅಜಯ್ ದುಬೆ ಅವರು ಗುಜರಾತ್ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದರು. ಈ ಪ್ರಕರಣದ ವಿಚಾರಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಗುಜರಾತ್ ಸರ್ಕಾರದ ಪರವಾಗೇ ನಿಂತಿತು.

‘ಈ ಸಿಂಹಗಳು ಗಿರ್ ಅಭಯಾರಣ್ಯದ ಪರಿಸರಕ್ಕೆ ಹೊಂದಿಕೊಂಡಿವೆ. ಅಳಿವಿನಂಚಿನಲ್ಲಿದ್ದ ಅವನ್ನು ಸರ್ಕಾರವು ಬಹಳ ಕಷ್ಟಪಟ್ಟು ಕಾಪಾಡಿಕೊಂಡಿದೆ. ಅವುಗಳ ಸಂಖ್ಯಾಭಿವೃದ್ಧಿ ಸ್ಥಿರವಾಗಿದೆ. ಇಂತಹ ಸಂದರ್ಭದಲ್ಲಿ ಅವನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಿದರೆ ಬೆಳವಣಿಗೆಗೆ ಧಕ್ಕೆಯಾಗುತ್ತದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿತು.

‘ಸಿಂಹಗಳನ್ನು ಸ್ಥಳಾಂತರಿಸಿ ಎಂದು ಮಧ್ಯಪ್ರದೇಶ ಸರ್ಕಾರ ಈವರೆಗೆ ಮನವಿಯನ್ನೇ ಸಲ್ಲಿಸಿಲ್ಲ’ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಘೋಷಿಸಿತು. ಇದರ ಮಧ್ಯೆಯೇ ಕುನೊ ಅಭಯಾರಣ್ಯ ಅಭಿವೃದ್ಧಿಗೆ ಮಧ್ಯಪ್ರದೇಶ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಆದರೆ ಒಂದು ಸಿಂಹವೂ ಕುನೊಗೆ ಸ್ಥಳಾಂತರವಾಗಿಲ್ಲ.

ಈ ಮಧ್ಯೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿದೆ. ‘ಸಿಂಹಗಳು ಏಕೆ ಸಾಯುತ್ತಿವೆ? ಸಾವನ್ನು ತಡೆಯಲು ಏನು ಮಾಡಿದ್ದೀರಿ ಎಂಬುದರ ಬಗ್ಗೆ ವಿವರಣೆ ನೀಡಿ’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.
**
ಗಾಯಗೊಂಡು ಸಿಂಹ ಸಾವು ಸಾಧ್ಯತೆ?
‘ಗುಂಪನ್ನು ಬಿಟ್ಟಿರುವ ಗಂಡು ಸಿಂಹವೊಂದು ಬೇರೊಂದು ಗುಂಪಿನ ನಾಯಕನ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ. ಆ ದಾಳಿಯಲ್ಲಿ ಗಾಯಗೊಂಡು ಸಿಂಹಗಳು ಮೃತಪಟ್ಟಿರಬಹದು. ಈ ರೀತಿಯ ಸಾವುಗಳು ಸಾಮಾನ್ಯ’ ಎಂದು ಸೆಪ್ಟೆಂಬರ್ 21ರಂದು ಗುಜರಾತ್ ಅರಣ್ಯ ಇಲಾಖೆ ಹೇಳಿಕೆ ನೀಡಿತ್ತು.

ಆದರೆ ಈಗ ವೈರಸ್‌ಗಳು ಪತ್ತೆಯಾಗಿರುವುದರಿಂದ ಗುಜರಾತ್ ಅರಣ್ಯ ಇಲಾಖೆ ಕಂಗಾಲಾಗಿದೆ. ಸಾಮಾನ್ಯ ಸಾವು ಎಂದು ಹೂಳಲಾಗಿದ್ದ ಸಿಂಹಗಳ ಶವಪರೀಕ್ಷೆಯನ್ನು ಮತ್ತೆ ನಡೆಸಲು ಮುಂದಾಗಿದೆ. ಉಳಿದಿರುವ ಸಿಂಹಗಳ ತ್ವರಿತ ರಕ್ಷಣೆಗೆ ದೇಶದ ಬೇರೆ ಕಡೆಗಳಿಂದಲೂ ಪರಿಣಿತ ವೈದ್ಯರನ್ನು ಕರೆಸಿಕೊಂಡಿದೆ.

ಆಧಾರ: ಗಿರ್ ರಾಷ್ಟ್ರೀಯ ಉದ್ಯಾನದ ಜಾಲತಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.