ಅಹಮದಾಬಾದ್: ‘ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿಯ ತೀರ್ಥಯಾತ್ರೆಗಾಗಿ ರಾಜ್ಯದ ಬುಡಕಟ್ಟು ಸಮುದಾಯದ ಪ್ರತಿ ವ್ಯಕ್ತಿಗೆ ₹ 5 ಸಾವಿರ ಆರ್ಥಿಕ ನೆರವು ನೀಡಲು ಗುಜರಾತ್‌ನ ಬಿಜೆಪಿ ಸರ್ಕಾರ ನಿರ್ಧರಿಸಿದೆ’ ಎಂದು ಅಲ್ಲಿನ ಪ್ರವಾಸೋದ್ಯಮ ಮತ್ತು ಯಾತ್ರಾ ಅಭಿವೃದ್ಧಿ ಸಚಿವ ಪೂರ್ಣೇಶ್ ಮೋದಿ ತಿಳಿಸಿದ್ದಾರೆ.
ದಸರಾ ಆಚರಣೆ ನಿಮಿತ್ತ ಶುಕ್ರವಾರ ಗುಜರಾತ್‌ನ ಡಾಂಗ್ಸ್ ಜಿಲ್ಲೆಯ ಶಬರಿಧಾಮ ಯಾತ್ರಾ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಗವಾನ್ ಶ್ರೀರಾಮನಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಯಾತ್ರಾ ಸ್ಥಳಗಳಲ್ಲಿ ಇನ್ನುಮುಂದೆ ಪ್ರತಿವರ್ಷ ರಾಜ್ಯಮಟ್ಟದ ದಸರಾ ಮಹೋತ್ಸವ ಆಯೋಜಿಸಲಾಗುವುದು. ಶ್ರೀರಾಮ ಜನ್ಮಭೂಮಿ ಯಾತ್ರೆಗಾಗಿ ರಾಜ್ಯದ ಬುಡಕಟ್ಟು ಸಮುದಾಯದ ಪ್ರತಿ ವ್ಯಕ್ತಿಗೆ ₹ 5 ಸಾವಿರ ಆರ್ಥಿಕ ನೆರವು ನೀಡಲಾಗುವುದು’ ಎಂದು ಹೇಳಿದರು.
‘ಗುಜರಾತ್‌ನ ಪೂರ್ವ ಭಾಗದ ಬುಡಕಟ್ಟು ಪ್ರದೇಶಗಳನ್ನು ಸಂಪರ್ಕಿಸುವ ಡಾಂಗ್ಸ್ ಜಿಲ್ಲೆಯ ಸಪುತಾರಾ ಮತ್ತು ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ‘ಏಕತಾ ಪ್ರತಿಮೆ’ ನಡುವೆ ಸರ್ಕಾರವು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ’ ಎಂದು ಪೂರ್ಣೇಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಲ್ಸದ್ ಸಂಸದ ಕೆ.ಸಿ. ಪಟೇಲ್ ಅವರು, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಖಚಿತಪಡಿಸಿದ್ದು, ಆ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ’ ಎಂದರು.
ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.