ಅಹಮದಾಬಾದ್: ಮಹಿಳೆಯ ಕುಟುಂಬದ ಸದಸ್ಯರು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದ ಅಂತರ ಧರ್ಮೀಯ ದಂಪತಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಗುಜರಾತ್ ಹೈಕೋರ್ಟ್ ಆದೇಶ ನೀಡಿದೆ.
ಪಾಲನಪುರದ 30 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರು, ಇದೇ ನಗರದ 29 ವರ್ಷದ ಹಿಂದೂ ಮಹಿಳೆಯನ್ನು ಕಳೆದ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. ತಮ್ಮ ಇಚ್ಛೆಯ ವಿರುದ್ಧ ಮದುವೆಯಾಗಿದ್ದರಿಂದ ಅಸಮಾಧಾನಗೊಂಡಿದ್ದ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಮನೆಯಿಂದ ಓಡಿ ಹೋಗುವಾಗ ತಮ್ಮ ಮಗಳು ಹಣವನ್ನು ಕದ್ದಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ದೂರಿನ ಆಧಾರದ ಮೇಲೆ ಬನಸ್ಕಾಂಥಾ ಜಿಲ್ಲೆಯ ಪಾಲನಪುರ ನಗರದ ಪೊಲೀಸರು, ಈ ದಂಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದರು. ಸ್ಥಳೀಯ ಮ್ಯಾಜಿಸ್ಟ್ರೇಟ್ ಅವರು ಜನವರಿ 18ರಿಂದ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದ್ದರು.
ನಂತರ, ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮುಸ್ಲಿಂ ವ್ಯಕ್ತಿಯ ಸಹೋದರ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ತಕ್ಷಣವೇ ದಂಪತಿಯನ್ನು ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಿತು.
‘ಪೊಲೀಸರ ಕ್ರಮ ಆಘಾತಕಾರಿಯಾಗಿದೆ. ಈ ಪ್ರಕರಣದಲ್ಲಿ ತಾರತಮ್ಯ ಮಾಡಿದ್ದಾರೆ. ಇಡೀ ಪ್ರಕರಣವನ್ನು ಪೊಲೀಸರು ಸಮರ್ಪಕವಾಗಿ ನಿಭಾಯಿಸಿಲ್ಲ’ ಎಂದು ನ್ಯಾಯಮೂರ್ತಿಗಳಾದ ಸೋನಿಯಾ ಗೋಕಾನಿ ಮತ್ತು ಸಂಗೀತಾ ವಿಶೇನ್ ಅವರನ್ನೊಳಗೊಂಡ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಜತೆಗೆ, ಈ ದಂಪತಿಯನ್ನು ಬಂಧಿಸಿದ ಮತ್ತು ಇಡೀ ಪ್ರಕರಣವನ್ನು ನಿಭಾಯಿಸಿದ ಪಾಲನಪುರ ಪೂರ್ವ ಮತ್ತು ಪಾಲನಪುರ ಪಶ್ಚಿಮ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ಕಾರ್ಯನಿರ್ವಹಣೆ ಮತ್ತು ನಡವಳಿಕೆ ಬಗ್ಗೆ ತನಿಖೆ ನಡೆಸಿ ಡಿಐಜಿಗೆ ವರದಿ ಸಲ್ಲಿಸಬೇಕು ಎಂದು ಇನ್‌ಸ್ಪೆಕ್ಟರ್ ಜನರಲ್ ಅವರಿಗೆ ಆದೇಶ ನೀಡಿತು.
ಇದನ್ನೂ ಓದಿ:ಮಾನಹಾನಿ ಪ್ರಕರಣ: ನಟಿ ಕಂಗನಾಗೆ ನೋಟಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.