ADVERTISEMENT

'ನಿತ್ಯಾನಂದನ ಸೆರೆಯಲ್ಲಿ ನನ್ನ ಹೆಣ್ಣುಮಕ್ಕಳು'; ಗುಜರಾತ್ ಕೋರ್ಟ್‌ಗೆ ಅರ್ಜಿ, ವಜಾ

ಪಿಟಿಐ
Published 4 ಫೆಬ್ರುವರಿ 2024, 13:00 IST
Last Updated 4 ಫೆಬ್ರುವರಿ 2024, 13:00 IST
<div class="paragraphs"><p>ನಿತ್ಯಾನಂದ</p></div>

ನಿತ್ಯಾನಂದ

   

ಅಹಮದಾಬಾದ್‌: ತಮ್ಮ ಇಬ್ಬರು ಹೆಣ್ಣು ಮಕ್ಕಳು ಸ್ವಘೋಷಿತ 'ದೇವಮಾನವ' ಹಾಗೂ ದೇಶದಿಂದ ಪಲಾಯನ ಗೈದಿರುವ ನಿತ್ಯಾನಂದನ ಬಂಧನದಲ್ಲಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್‌ ಹೈಕೋರ್ಟ್‌ ವಜಾ ಮಾಡಿದೆ.

ಜನಾರ್ದನ ಶರ್ಮಾ ಎಂಬವರು 2019ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸ್ಲಲಿಸಿದ್ದರು. ನ್ಯಾ. ಎ.ವೈ.ಕೊಗ್ಜೆ ಮತ್ತು ನ್ಯಾ.ರಾಜೇಂದ್ರ ಎಂ.ಸರೀನ್‌ ಅವರಿದ್ದ ವಿಭಾಗೀಯ ಪೀಠ, ಈ ಅರ್ಜಿಯ ವಿಚಾರಣೆ ನಡೆಸಿತು.

ADVERTISEMENT

ಶರ್ಮಾ ಅವರ 21 ಮತ್ತು 18 ವರ್ಷದ ಹೆಣ್ಣು ಮಕ್ಕಳು 2024ರ ಜನವರಿ 10ರಂದು ಆನ್‌ಲೈನ್‌ ಮೂಲಕ ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದರು. ಆ ವೇಳೆ ಅವರು, ತಾವು ಅಕ್ರಮ ಸೆರೆವಾಸದಲ್ಲಿ ಇಲ್ಲ. ಪ್ರಜ್ಞಾಪೂರ್ವಕವಾಗಿ ಆಧ್ಯಾತ್ಮದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂದು ತಿಳಿಸಿದ್ದರು. ಈ ಹೇಳಿಕೆಗಳನ್ನು ಪರಿಗಣಿಸಿರುವ ಕೋರ್ಟ್‌, ಅರ್ಜಿದಾರರ ಮಕ್ಕಳು ಸಂತಸದಿಂದ ಇದ್ದಾರೆ ಎಂಬುದಾಗಿ ಶುಕ್ರವಾರ ಆದೇಶ ನೀಡಿದೆ.

'ಹೆಣ್ಣುಮಕ್ಕಳಿಬ್ಬರೂ ವಯಸ್ಕರಾಗಿದ್ದು, ತಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಷ್ಟು ಪಕ್ವವಾಗಿದ್ದಾರೆ ಎಂಬುದು ಸಮಾಧಾನದ ಸಂಗತಿ. ಸದ್ಯ ಅವರು ಇರುವ ಸ್ಥಳದಲ್ಲಿ ಸಂತಸದಿಂದ ಇದ್ದಾರೆ. ಅದರಂತೆ, ಅರ್ಜಿದಾರರ ಮೇಲ್ಮನವಿಯನ್ನು ವಜಾಗೊಳಿಸಬಹುದಾಗಿದೆ. ಹೆಣ್ಣುಮಕ್ಕಳೊಂದಿಗೆ ವರ್ಚುವಲ್‌ ಆಗಿ ನಡೆಸಿದ ಮಾತುಕತೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಅದನ್ನು ಸುರಕ್ಷಿತವಾಗಿ ಇಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ' ಎಂದು ಪೀಠ ಹೇಳಿದೆ.

ತಮ್ಮ ಮಕ್ಕಳು ಭಾರತೀಯ ರಾಯಭಾರಿ ಕಚೇರಿ ಮೂಲಕವಲ್ಲದೆ, ಅನಧಿಕೃತ ದೇಶದ (ಕೈಲಾಸ) ವಿಡಿಯೊ ಲಿಂಕ್‌ ಮೂಲಕ ವಿಚಾರಣೆಗೆ ಹಾಜರಾಗಿರುವುದು ಅವರ ಸುರಕ್ಷತೆಯ ಬಗ್ಗೆ ಕಳವಳ ಉಂಟುಮಾಡಿದೆ ಎಂದು ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಅಹಮದಾಬಾದ್‌ನಲ್ಲಿರುವ ಆಶ್ರಮದಲ್ಲಿ ತಮ್ಮ ಮಕ್ಕಳನ್ನು ಬಂಧನದಲ್ಲಿ ಇರಿಸಲಾಗಿತ್ತು. ನಿತ್ಯಾನಂದ ದೇಶದಿಂದ ಪಲಾಯನಗೈಯ್ಯುವ ವೇಳೆ, ಅವರನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿ ಶರ್ಮಾ ಅವರು 2019ರ ನವೆಂಬರ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಬೇಕಾಗಿರುವ ನಿತ್ಯಾನಂದ, ತನ್ನ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾನೆ. 2019ರಲ್ಲಿ ಭಾರತದಿಂದ ಪಲಾಯನ ಗೈದಿರುವ ಆತ, ಅದೇ ವರ್ಷ 'ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸ' ಹೆಸರಿನ ದೇಶ ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.