ಅಹಮದಾಬಾದ್: ಇಶ್ರಾತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಸಿಬಿಐ ತನಿಖಾ ತಂಡದ ನೇತೃತ್ವ ವಹಿಸಿದ್ದ ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿ ಸತೀಶ್ ಚಂದ್ರ ವರ್ಮಾ ಅವರನ್ನು ಅವರ ನಿವೃತ್ತಿಗಿಂತ ಒಂದು ತಿಂಗಳು ಮೊದಲೇ ಸೇವೆಯಿಂದ ವಜಾಗೊಳಿಸಲಾಗಿದೆ. ಇದೇ 30ರಂದು ಅವರ ನಿವೃತ್ತಿ ನಿಗದಿಯಾಗಿತ್ತು.
ಇಲಾಖಾ ಪ್ರಕ್ರಿಯೆಯ ವಿವಿಧ ಕಾರಣಗಳಿಗಾಗಿ ಅವರನ್ನು ಸರ್ಕಾರ ಆಗಸ್ಟ್ 30ರಂದು ಸೇವೆಯಿಂದ ವಜಾಗೊಳಿಸಿ ಆದೇಶಿಸಿದೆ. ‘ದೇಶದ ಅಂತರರಾಷ್ಟ್ರೀಯ ಸಂಬಂಧಗಳನ್ನು ಹದಗೆಡಿಸುವ ನಿಟ್ಟಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ’ ಕಾರಣವೂ ಸೇರಿದಂತೆ ಹಲವು ಕಾರಣಗಳಿಗಾಗಿ ವರ್ಮಾ ಅವರನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ವರ್ಮಾ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ‘ಈ ವಿಷಯ ನ್ಯಾಯಾಲಯದಲ್ಲಿರುವ ಕಾರಣ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ವರ್ಮಾ ಅವರ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.
ವರ್ಮಾ ಅವರನ್ನು ವಜಾಗೊಳಿಸುವ ಆದೇಶವನ್ನು ದೆಹಲಿ ಹೈಕೋರ್ಟ್ ವರ್ಷದಿಂದ ತಡೆಹಿಡಿದಿತ್ತು. ವಜಾ ಆದೇಶದ ಜಾರಿಗೆ ಕೋರಿ ಕೇಂದ್ರ ಸರ್ಕಾರ ಸೆ. 1ರಂದು ಅರ್ಜಿ ಸಲ್ಲಿಸಿತ್ತು. ಅದಕ್ಕೆ ಹೈಕೋರ್ಟ್ ಸೆ. 7ರಂದು ಅನುಮತಿ ನೀಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಆದೇಶವನ್ನು ವರ್ಮಾ ಅವರು ಸುಪ್ರೀಂಕೊರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
19 ವರ್ಷದ ಯುವತಿ ಇಶ್ರಾತ್ ಜಹಾನ್, ಆಕೆಯ ಸ್ನೇಹಿತ ಜಾವೆದ್ ಶೇಕ್ ಉರುಫ್ ಪ್ರಾಣೇಶ್ ಪಿಳ್ಳೈ ಮತ್ತು ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಅಹಮದಾಬಾದ್ ಹೊರವಲಯದಲ್ಲಿ 2004ರಲ್ಲಿ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದವರು ಈಗಿನ ಪ್ರಧಾನಿ ನರೇಂದ್ರ ಮೋದಿ.
ಇದು ನಕಲಿ ಎನ್‌ಕೌಂಟರ್ ಎಂದು ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದ್ದರೂ, ಈ ಕುರಿತು ಯಾವುದೇ ವಿಚಾರಣೆ ನಡೆಯಲಿಲ್ಲ. 2010–11ರಲ್ಲಿ ಗುಜರಾತ್ ಸರ್ಕಾರವು ಇಲಾಖೆ ಪ್ರಕರಣಗಳ ಮೇರೆಗೆ ವರ್ಮಾ ಅವರಿಗೆ ಬಡ್ತಿಯನ್ನು ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.