ಮೊರ್ಬಿ: ಗುಜರಾತ್‌ನ ಮೊರ್ಬಿ ಎಂಬಲ್ಲಿರುವ ಮಚು ನದಿಯ ತೂಗು ಸೇತುವೆ ಕುಸಿತವು, ಇದೇ ನದಿಯಲ್ಲಿ 43 ವರ್ಷಗಳ ಹಿಂದೆ ನಡೆದಿದ್ದ ಭೀಕರ ದುರಂತವನ್ನು ನೆನಪಿಸಿದೆ.
ಮಚು ನದಿ ರಾಜ್‌ಕೋಟ್ ಜಿಲ್ಲೆಯ ಜಸ್ದನ್ ಸರ್ದಾರ್, ಮಾಂಡ್ವಾ ಮತ್ತು ಸುರೇಂದ್ರನಗರ ಜಿಲ್ಲೆಯ ಚೋಟಿಲಾ ಬೆಟ್ಟಗಳ ಶ್ರೇಣಿಯಲ್ಲಿ ಹುಟ್ಟಿ, ರಾಜ್‌ಕೋಟ್ ಜಿಲ್ಲೆಗಳ ಮಲಿಯಾ, ಮೊರ್ಬಿ, ವಾಂಕನೇರ್, ಜಸ್ದಮ್ ಮತ್ತು ರಾಜ್‌ಕೋಟ್ ತಾಲೂಕುಗಳ ಮೂಲಕ ಹಾದುಹೋಗುತ್ತದೆ.
43 ವರ್ಷಗಳ ಹಿಂದೆ ಆಗಸ್ಟ್ ತಿಂಗಳಲ್ಲಿ ಒಂದು ವಾರ ನಿರಂತರವಾಗಿ ಸುರಿದ ಮಳೆಯಿಂದಾಗಿ ಎರಡು ಮೈಲಿ ಉದ್ದದ ಮಚ್ಚು ಅಣೆಕಟ್ಟು-2 ಶಿಥಿಲಗೊಂಡಿತು. 1979ರ ಆಗಸ್ಟ್ 11ರಂದು ಅಣೆಕಟ್ಟು ಒಡೆದುಹೋಗಿತ್ತು. ಈ ಘಟನೆಯು ಅತ್ಯಂತ ಭೀಕರ ದುರಂತ ಎಂದು ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ದಾಖಲಾಗಿದೆ.
ಅಣೆಕಟ್ಟಿನಿಂದ ಹೊರ ಬಂದ ಭಾರಿ ಪ್ರಮಾಣದ ನೀರು ಜನನಿಬಿಡ ಪ್ರದೇಶದ ಮೂಲಕ ನುಗ್ಗಿ ಕೈಗಾರಿಕಾ ನಗರವಾದ ಮೊರ್ಬಿ ಮತ್ತು ಅದರ ಸುತ್ತಮುತ್ತಲಿನ ಕೃಷಿ ಪ್ರಧಾನ ಗ್ರಾಮಗಳನ್ನು ಧ್ವಂಸಗೊಳಿಸಿತ್ತು.
ಭೀಕರ ದುರಂತದಲ್ಲಿ ಅಂದಾಜುಗಳು 1,800 ರಿಂದ 25,000 ಮಂದಿ ಮೃತಪಟ್ಟಿದ್ದರು ಎನ್ನಲಾಗಿದೆ. ಆದರೆ, ನಿಖರ ಮಾಹಿತಿ ಲಭ್ಯವಿಲ್ಲ. ಯಾವುದೇ ದಾಖಲೆಗಳೂ ಇಲ್ಲ.
‘ವಿಪತ್ತಿನ ಸಂಖ್ಯೆಗೆ ಸಂಬಂಧಿಸಿದಂತೆ ದೃಢವಾದ ಅಂಕಿಅಂಶಗಳಿಲ್ಲವಾದರೂ, ಪ್ರವಾಹದ ಹಿನ್ನೆಲೆಯಲ್ಲಿ ಅಂದಾಜುಗಳು 25,000 ಮಂದಿ ಮೃತಪಟ್ಟಿದ್ದಾರೆ ಎನ್ನಬಹುದು’ ಎಂದು 2011 ರಲ್ಲಿ ಬಿಡುಗಡೆಯಾದ ಪುಸ್ತಕ ‘ನೋ ಒನ್ ಹ್ಯಾಡ್ ಎ ಟಾಂಗ್ ಟು ಸ್ಪೀಕ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಒನ್ ಆಫ್ ಹಿಸ್ಟರಿಸ್ ಡೆಡ್ಲಿಯೆಸ್ಟ್ ಫ್ಲಡ್ಸ್" ಕೃತಿಯಲ್ಲಿ ಉಲ್ಲೇಖಿಸಲಾಗಿದೆ.
ಮಚ್ಚು ಅಣೆಕಟ್ಟು-2 ಅನ್ನು ನಂತರ 1980ರ ದಶಕದ ಕೊನೆಯಲ್ಲಿ ಪುನರ್ ನಿರ್ಮಾಣ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.