ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟಿಸಿದ್ದ ಪ್ರಕರಣದ ಸಂಬಂಧ ಶಾಸಕ ಜಿಗ್ನೇಶ್ ಮೆವಾನಿ ಅವರಿಗೆ ಕೊಕ್ರಜಾರ್‌ನ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಜಿಗ್ನೇಶ್ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿದ್ದ ಕೋರ್ಟ್ ಭಾನುವಾರ ಆದೇಶ ಕಾಯ್ದಿರಿಸಿತ್ತು.
ವಡಗಾಮ್ ಕ್ಷೇತ್ರದ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್ ಮೇವಾನಿ, ಮೋದಿ ಅವರನ್ನು ಟೀಕಿಸಿ ಮಾಡಲಾದ ಟ್ವೀಟ್‌ಗಳ ಸಂಬಂಧ ಬಂಧನಕ್ಕೆ ಒಳಗಾಗಿದ್ದರು. ಹಲವು ಷರತ್ತುಗಳೊಂದಿಗೆ ಕೋರ್ಟ್ ಅವರಿಗೆ ಇಂದು ಜಾಮೀನು ಮಂಜೂರು ಮಾಡಿದೆ.
ಅಸ್ಸಾಂನ ನಾಲ್ವರು ಪೊಲೀಸರನ್ನು ಒಳಗೊಂಡ ತಂಡವು ಬನಾಸಕಾಂಠಾದ ಪಾಲನ್ಪುರ್‌ನ ಅತಿಥಿ ಗೃಹದಿಂದ ಜಿಗ್ನೇಶ್ ಅವರನ್ನು ಗುರುವಾರ ವಶಕ್ಕೆ ಪಡೆದಿತ್ತು.
ಪ್ರಕರಣದ ಕುರಿತು ಮಾತನಾಡಿರುವ ಜಿಗ್ನೇಶ್, 'ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪಿತೂರಿಯಾಗಿದೆ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಈ ರೀತಿ ಮಾಡಲಾಗಿದೆ. ಅವರು ಇಂಥದ್ದನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಇದೇ ರೀತಿ ರೋಹಿತ್ ವೇಮುಲಗೆ ಮಾಡಿದರು, ಚಂದ್ರಶೇಖರ್ ಆಜಾದ್ ಅವರಿಗೂ ಹೀಗೆ ಮಾಡಿದರು, ಈಗ ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ' ಎಂದು ಆರೋಪಿಸಿದರು.
'ಗೋಡ್ಸೆಯನ್ನು ದೇವರಾಗಿ ಕಾಣುವ' ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಕೋಮುಗಳ ನಡುವಿನ ಸಂಘರ್ಷದ ವಿರುದ್ಧ ಮಾತನಾಡಬೇಕು, ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಬೇಕು ಎಂಬರ್ಥದ ಟ್ವೀಟ್‌ಗಳನ್ನು ಜಿಗ್ನೇಶ್ ಮಾಡಿದ್ದರು.
ಆ ಟ್ವೀಟ್‌ಗಳ ಬಗ್ಗೆ ಅಸ್ಸಾಂ ಕೊಕ್ರಜಾರ್ ಜಿಲ್ಲೆಯಲ್ಲಿ ಅನುಪ್ ಕುಮಾರ್ ಡೇ ಎಂಬುವವರು ಜಿಗ್ನೇಶ್ ಅವರ ವಿರುದ್ಧ ದೂರು ನೀಡಿದ್ದರು. ಆ ದೂರಿನ ಆಧಾರದ ಮೇಲೆ ಸೆಕ್ಷನ್ 120ಬಿ (ಅಪರಾಧ ಸಂಚು), ಸೆಕ್ಷನ್ 153 (ಎ) (ಎರಡು ಸಮುದಾಯಗಳ ನಡುವೆ ದ್ವೇಷ ಹಂಚುವುದು), 295 (ಎ) (ಧಾರ್ಮಿಕ ಭಾವನೆಗೆ ಧಕ್ಕೆ ತರಲು ಪ್ರಾರ್ಥನಾ ಸ್ಥಳಕ್ಕೆ ಕಳಂಕ ಉಂಟು ಮಾಡುವುದು), 506 (ಅಪರಾಧದ ಬೆದರಿಕೆ) ಹಾಗೂ ಐಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಏಪ್ರಿಲ್ 18ರಂದು ಜಿಗ್ನೇಶ್ ಅವರು ಮಾಡಿರುವ ಟ್ವೀಟ್‌ಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. 'ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ದೇವರಾಗಿ ಕಾಣುತ್ತಾರೆ ಹಾಗೂ ಪೂಜಿಸುತ್ತಾರೆ. ಕೋಮು ಗಲಭೆ ನಡೆದಿರುವ ಹಿಮ್ಮತ್‌ನಗರ, ಕಂಭಾತ್ ಹಾಗೂ ವೆರಾವಲ್‌ನಲ್ಲಿ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಪ್ರಧಾನಿ ಏಪ್ರಿಲ್ 20ಕ್ಕೆ ಗುಜರಾತ್‌ಗೆ ಭೇಟಿ ನೀಡಿದಾಗ ಆಗ್ರಹಿಸಬೇಕು' ಎಂದು ಟ್ವೀಟಿನಲ್ಲಿ ಕಂಡಿರುವುದಾಗಿ ದೂರುದಾರ ಅನುಪ್ ಕುಮಾರ್ ಡೇ ದೂರಿನಲ್ಲಿ ಪ್ರಸ್ತಾಪಿಸಿದ್ದರು.
ಆ ಟ್ವೀಟ್‌ಗಳಿಂದಾಗಿ ಸಾರ್ವಜನಿಕರ ನೆಮ್ಮದಿಗೆ ಹಾನಿಯಾಗಲಿದೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಗುಂಪು ಮತ್ತೊಂದು ಸಮುದಾಯ ಮೇಲೆ ಯಾವುದೇ ದುಷ್ಕೃತ್ಯ ನಡೆಸುವ ಬಗ್ಗೆ ಉತ್ತೇಜಿಸುವಂತಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು. ಜಿಗ್ನೇಶ್ ಮೆವಾನಿ (@jigneshmevani80) ಅವರು ಮಾಡಿದ್ದ ಆ ಎರಡೂ ಟ್ವೀಟ್‌ಗಳನ್ನು ಟ್ವಿಟರ್ ಭಾರತದಲ್ಲಿ ತಡೆಹಿಡಿದಿದೆ.
ಜಿಗ್ನೇಶ್ ಅವರ ಬಂಧನಕ್ಕೆ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮೆವಾನಿ ಬಂಧನವು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಈ ಮೂಲಕ ಅವರನ್ನು ಆಯ್ಕೆ ಮಾಡಿದ್ದ ಜನರಿಗೆ ಅಪಮಾನ ಮಾಡಲಾಗಿದೆ ಎಂದಿದ್ದ ಅವರು, 'ಮೋದಿಯವರೇ, ನೀವು ಆಡಳಿತಯಂತ್ರ ಬಳಸಿ ವಿರೋಧವನ್ನು ಹತ್ತಿಕ್ಕಬಹುದು. ಆದರೆ, ಸತ್ಯವನ್ನು ಮರೆಮಾಚಲಾಗದು' ಎಂದು ಕುಟುಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.