ನವದೆಹಲಿ (ಪಿಟಿಐ): ಗುಜರಾತ್‌ನಿಂದ ರಾಜ್ಯಸಭೆಯ ಎರಡು ಸ್ಥಾನಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಗುಜರಾತ್ ಘಟಕವು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರು ಲೋಕಸಭೆಗೆ ಆಯ್ಕೆಯಾದ ಕಾರಣ ಈ ಸ್ಥಾನಗಳು ತೆರವಾಗಿವೆ.
ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ‘ಚುನಾವಣಾ ತಕರಾರು ಅರ್ಜಿ’ಯನ್ನು ಕಾಂಗ್ರೆಸ್ ಪಕ್ಷವು ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ.ಆರ್. ಗವಾಯಿ ಹೇಳಿದ್ದಾರೆ. ಸಂಸತ್, ವಿಧಾನಸಭೆ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಸಲ್ಲಿಸುವ ಅರ್ಜಿಗಳಿಗೆ ‘ಚುನಾವಣಾ ತಕರಾರು ಅರ್ಜಿ’ ಎಂದು ಕರೆಯಲಾಗುತ್ತದೆ.
ಗುಜರಾತ್ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಪರೇಶ್‌ಭಾಯಿ ಧನಾನಿ ಅವರು ಎರಡು ಸ್ಥಾನಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಆಯೋಗದ ಆದೇಶವು ‘ಅಸಾಂವಿಧಾನಿಕ ಮತ್ತು ಕಾನೂನಬಾಹಿರ’ ಎಂದು ಅವರು ವಾದಿಸಿದ್ದರು. ಗುಜರಾತ್ ಸೇರಿಸಿ ಎಲ್ಲ ರಾಜ್ಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವಂತೆ ಆಯೋಗಕ್ಕೆ ಸೂಚನೆ ಕೋಡಬೇಕು ಎಂದು ಅವರು ಕೋರಿದ್ದರು.
ಈ ವಾದವನ್ನು ಆಯೋಗವು ವಿರೋಧಿಸಿತ್ತು. ರಾಜ್ಯಸಭೆ ಸೇರಿ ಯಾವುದೇ ಸದನದಲ್ಲಿ ಖಾಲಿ ಇರುವ ಸ್ಥಾನಗಳನ್ನು ‘ಪ್ರತ್ಯೇಕ ಸ್ಥಾನ’ ಎಂದೇ ಪರಿಗಣಿಸ
ಲಾಗುವುದು. ಹಾಗಾಗಿ ಪ್ರತ್ಯೇಕವಾಗಿಯೇ ಅಧಿಸೂಚನೆ ಹೊರಡಿಸಲಾಗುತ್ತದೆ. ಒಂದೇ ದಿನ ಮತದಾನ ನಡೆಸುವ ಸಾಧ್ಯತೆ ಇರುತ್ತದೆ. ಹಾಗಿದ್ದರೂ ಒಂದೊಂದು ಸ್ಥಾನಕ್ಕೂ ಪ್ರತ್ಯೇಕ ಮತದಾನ ನಡೆಸಲಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿತ್ತು.
ಖಾಲಿ ಸ್ಥಾನಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವುದರ ಪರವಾಗಿ 1994 ಮತ್ತು 2009ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು ಎಂಬುದನ್ನೂ ಆಯೋಗವು ಉಲ್ಲೇಖಿಸಿತ್ತು.
ಬಿಜೆಪಿಗೆ ಅನುಕೂಲ
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನೂರು ಸದಸ್ಯರನ್ನು ಹೊಂದಿದೆ. ವಿರೋಧ ಪಕ್ಷ ಕಾಂಗ್ರೆಸ್‌ನ ಸದಸ್ಯರ ಸಂಖ್ಯೆ 75. ಏಳು ಸ್ಥಾನಗಳು ಖಾಲಿ ಇವೆ. ಹಾಗಾಗಿ ಪ್ರತ್ಯೇಕವಾಗಿ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಒಂದು ಸ್ಥಾನವೂ ದಕ್ಕುವುದಿಲ್ಲ.
‘ಆಯೋಗವು ದುರುದ್ದೇಶ ಮತ್ತು ಪಕ್ಷಪಾತದಿಂದ ವರ್ತಿಸಿದೆ. ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಅವಕಾಶವನ್ನು ಕಮರಿಸುವ ಉದ್ದೇಶವನ್ನು ಇದು ಹೊಂದಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ತನ್ನ ರಾಜಕೀಯ ಕಾರ್ಯಸೂಚಿಗಾಗಿ ಆಯೋಗವನ್ನು ಬಳಸಿಕೊಳ್ಳುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಚಿವ ಜೈಶಂಕರ್ ನಾಮಪತ್ರ
ಗಾಂಧಿನಗರ (ಪಿಟಿಐ): ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಗುಜರಾತ್‌ನಿಂದ ರಾಜ್ಯಸಭೆಗೆ ಜುಲೈ 5ರಂದು ನಡೆಯಲಿರುವ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಸೋಮವಾರ ಬಿಜೆಪಿ ಸೇರಿದ ಜೈಶಂಕರ್ ಅವರು ಸಂಜೆಯೇ ಅಹ್ಮದಾಬಾದ್‌ಗೆ ಬಂದರು.ನರೇಂದ್ರ ಮೋದಿ ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ಜೈಶಂಕರ್ ಅವರು ವಿದೇಶಾಂಗ ಕಾರ್ಯದರ್ಶಿಯಾಗಿದ್ದರು.
ಗುಜರಾತ್ ಬಿಜೆಪಿಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಜುಗಾಲಿ ಠಾಕೂರ್ ಅವರು ಖಾಲಿ ಇರುವ ಮತ್ತೊಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.ಕಾಂಗ್ರೆಸ್‌ನಿಂದ ಗೌರವ್ ಪಾಂಡ್ಯ ಮತ್ತು ಚಂದ್ರಿಕಾ ಚೂಡಾಸಮಾ ಅವರು ಕಣಕ್ಕಿಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.