ADVERTISEMENT

ಗೋದ್ರೋತ್ತರ ಗಲಭೆ ಪ್ರಕರಣ: ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2023, 11:17 IST
Last Updated 19 ಜುಲೈ 2023, 11:17 IST
ತೀಸ್ತಾ ಸೆಟಲ್ವಾಡ್‌
ತೀಸ್ತಾ ಸೆಟಲ್ವಾಡ್‌   

ನವದೆಹಲಿ: ಗೋಧ್ರೋತ್ತರ ಗಲಭೆಗಳ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರಿಗೆ ಸುಪ್ರೀಂಕೋರ್ಟ್‌ ಬುಧವಾರ ನಿಯಮಿತ (ರೆಗ್ಯುಲರ್) ಜಾಮೀನು ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ, ಎ.ಎಸ್‌.ಬೋಪಣ್ಣ ಮತ್ತು ದೀಪಂಕರ್‌ ದತ್ತ ಅವರಿದ್ದ ಪೀಠ, ನಿಯಮಿತ ಜಾಮೀನು ಕೋರಿ ತೀಸ್ತಾ ಸೆಟಲ್ವಾಡ್‌ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಗುಜರಾತ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.

‘ಈ ಪ್ರಕರಣದಲ್ಲಿ ಸೆಟಲ್ವಾಡ್‌ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಈಗಾಗಲೇ ಸಲ್ಲಿಸಿರುವ ಕಾರಣ, ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸುವ ಅಗತ್ಯ ಇಲ್ಲ’ ಎಂದು ನ್ಯಾಯಪೀಠ ಹೇಳಿತು.

ADVERTISEMENT

‘ಮೇಲ್ಮನವಿದಾರರು (ಸೆಟಲ್ವಾಡ್) ಒಪ್ಪಿಸಿರುವ ಅವರ ಪಾಸ್‌ಪೋರ್ಟ್‌ ಸೆಷನ್ಸ್‌ ಕೋರ್ಟ್‌ ವಶದಲ್ಲಿದೆ. ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಬಾರದು. ಅವರಿಂದ ದೂರ ಇರಬೇಕು’ ಎಂದೂ ನ್ಯಾಯಪೀಠ ಸೂಚಿಸಿತು.

‘ಒಂದು ವೇಳೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆದದ್ದು ಕಂಡುಬಂದಲ್ಲಿ ಗುಜರಾತ್‌ ಪೊಲೀಸರು ನೇರವಾಗಿ ಸುಪ್ರೀಂಕೋರ್ಟ್‌ ಕದತಟ್ಟಬಹುದು’ ಎಂದೂ ಸ್ಪಷ್ಟಪಡಿಸಿತು.

ಗೋಧ್ರೋತ್ತರ ಗಲಭೆಗಳ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ತಿರುಚಿ ಮುಗ್ಧ ಜನರನ್ನು ಸಿಲುಕಿಸಲು ಯತ್ನಿಸಿದ ಆರೋಪವನ್ನು ತೀಸ್ತಾ ಎದುರಿಸುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಜೂನ್‌ 25ರಂದು ತೀಸ್ತಾ, ಮಾಜಿ ಡಿಜಿಪಿ ಆರ್‌.ಬಿ.ಶ್ರೀಕುಮಾರ್ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್ ಅವರನ್ನು ಪೊಲೀಸರು ಬಂಧಿಸಿದ್ದರು.

ಕಳೆದ ವರ್ಷ ಜುಲೈ 30ರಂದು ಅಹಮದಾಬಾದ್ ಸೆಷನ್ಸ್ ಕೋರ್ಟ್‌, ತೀಸ್ತಾ ಮತ್ತು ಶ್ರೀಕುಮಾರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಬಿ.ಆರ್‌. ಗವಾಯಿ, ಎ.ಎಸ್. ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರಿದ್ದ ತ್ರಿಸದಸ್ಯ ಪೀಠವು, ತೀಸ್ತಾ ಅವರಿಗೆ ಜಾಮೀನು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಜಾಮೀನು ನೀಡಿದೆ.

ಜಾಮೀನು ಅವಧಿಯಲ್ಲಿ ತೀಸ್ತಾ ಅವರ ಪಾಸ್‌ಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯದಲ್ಲಿ ಇರಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರದೇ ದೂರ ಉಳಿಯಬೇಕು ಎಂಬ ಷರತ್ತು ವಿಧಿಸಿದೆ. ಹಾಗೂ ಷರತ್ತನ್ನು ಉಲ್ಲಂಘಿಸಿರುವುದು ಕಂಡುಬಂದರೆ ಜಾಮೀನು ರದ್ದು ಮಾಡಲಾಗುವುದು ಎಂದು ಕೋರ್ಟ್‌ ಹೇಳಿದೆ. 

ಈ ಪ್ರಕರಣದಲ್ಲಿ ತೀಸ್ತಾ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿತ್ತು. ಅದರ ಅವಧಿ ಮುಗಿದಿದ್ದರಿಂದ ನ್ಯಾಯಾಲಯಕ್ಕೆ ಶರಣಾಗುವಂತೆ ಗುಜರಾತ್‌ ಹೈಕೋರ್ಟ್‌ ಜುಲೈ 1ರಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 

 ‌‌2002ರ ಗೋದ್ರೋತ್ತರ ಗಲಭೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಪರಾಧಿಗಳನ್ನು ಬಂಧಿಸಲು ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ತೀಸ್ತಾ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.