ವೆರಾವಲ್(ಗುಜರಾತ್): ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಿಂಹದ ದಾಳಿಯಿಂದ 40 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುಬೆನ್ ಅಮ್ಹೇದಾ ಮೃತಪಟ್ಟ ಮಹಿಳೆ. ವೆರಾವಲ್ ತಾಲ್ಲೂಕಿನ ವಡೊದರಾ– ದೊಡಿಯಾ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ.
‘ಭಾನುವಾರ ಮಧ್ಯಾಹ್ನ ಗ್ರಾಮದ ಐದಾರು ಮಹಿಳೆಯರ ಜತೆಗೂಡಿ ಭಾನುಬೆನ್ ಕಾಡಿನೊಳಗೆ ಕಟ್ಟಿಗೆ ಸಂಗ್ರಹಿಸಲು ತೆರಳಿದ್ದರು. ಮಹಿಳೆಯರ ಗುಂಪು ಸಂಜೆ ಕಾಡಿನಿಂದ ಹಿಂತಿರುಗುವಾಗ ಭಾನುಬೆನ್ ಅವರ ಮೇಲೆ ದಾಳಿ ಮಾಡಿದ ಸಿಂಹ ಕಾಡಿನೊಳಗೆ ಎಳೆದೊಯ್ದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡರು. ಮಹಿಳೆಯ ಮೃತದೇಹವು ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಖಿಮಾನಂದ ಪಂಪಾನಿಯಾ ತಿಳಿಸಿದ್ದಾರೆ.
‘ವಡೊದರಾ–ದೊಡಿಯಾ ಸಮೀಪದ ಪ್ರದೇಶಗಳಲ್ಲಿ ಈ ಹಿಂದೆಯೂ ಸಿಂಹಗಳು ಪತ್ತೆಯಾಗಿದ್ದವು. ಈ ಭಾಗದಲ್ಲಿ ಸಿಂಹಗಳು ವಾಸಿಸುವುದಿಲ್ಲ. ಆದರೆ, ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳಲು ಈ ಭಾಗದ ಅರಣ್ಯವನ್ನು ಕಾರಿಡಾರ್ ಆಗಿ ಬಳಸುತ್ತವೆ’ ಎಂದು ಪಂಪಾನಿಯಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.