ಅಹಮದಾಬಾದ್: ಕಾರಿನೊಳಗೆಧಗೆ ಹೆಚ್ಚಾದರೆ, ಕಾರು ಬಿಸಿಯಾದರೆ ನಾವು ನೀವೆಲ್ಲ ಏನು ಮಾಡುತ್ತೇವೆ? ಕಾರಿನೊಳಗೆ ಎ.ಸಿ ಹಾಕಿಕೊಳ್ಳುತ್ತೇವೆ, ಕಾರನ್ನು ನೆರಳಿಗೆ ನಿಲ್ಲಿಸುತ್ತೇವೆ. ಲಕ್ಷಾಂತರ ರೂಪಾಯಿಗಳ ಕಾರಿಗೆ ಸಗಣಿ ಬಳಿಯುತ್ತೇವೆಯೇ? ಆದರೆ, ಗುಜರಾತ್‌ನ ಅಹಮದಾಬಾದ್‌ನ ಮಹಿಳೆಯೊಬ್ಬರು ತಮ್ಮ ಕಾರನ್ನು ತಂಪಾಗಿಡಲು ಸಗಣಿ ಬಳಿದು ಸುದ್ದಿಯಾಗಿದ್ದಾರೆ.
ಸೆಜಲ್ ಶಾ ಎಂಬುವವರು ತಮ್ಮ ಟೊಯೊಟಾ ಆಲ್ಟೀಸ್ ಕಾರಿನ ಮೇಲ್ಮೈಗೆ ಸಗಣಿ ಸಾರಿಸಿರುವ ಫೋಟೋಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಸಗಣಿಯಿಂದಲೇ ಅಲ್ಲಲ್ಲಿ ರಂಗೋಲಿ ಆಕೃತಿಗಳನ್ನು ಕಾರಿನ ಮೇಲೆ ಬಿಡಿಸಲಾಗಿದ್ದು, ಸದ್ಯ ಅಹಮದಾಬಾದ್‌ನ ರಸ್ತೆಗಳಲ್ಲಿ ಈ ಕಾರು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಸಗಣಿ ಬಳಿಯುವುದರಿಂದ ಕಾರಿನ ತಾಪಮಾನವನ್ನು ನಿಯಂತ್ರಣದಲ್ಲಿಡಬಹುದು ಎನ್ನುತ್ತಾರೆ ಸೆಜಲ್ ಶಾ. ಬೇಸಿಗೆಯಲ್ಲಿ ಕಾರು ತಂಪಾಗಿದ್ದರೆ, ಚಳಿಗಾಲದಲ್ಲಿ ಬೆಚ್ಚಗಿರುತ್ತದೆ ಎಂಬುದು ಶಾ ಅವರ ಪ್ರತಿಪಾದನೆ. ಅಷ್ಟೇ ಅಲ್ಲ, ಕಾರಿಗೆ ಆಗುವ ತರಚು ಗುರುತುಗಳ ಬಾಧೆಯೂ ತಪ್ಪುತ್ತದೆ ಎನ್ನುತ್ತಾರವರು.
‘ಜಾಗತಿಕ ತಾಪಮಾನದಂಥ ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು ಈ ಮಾದರಿಯ ಉಪಾಯಗಳು ಸಹಕಾರಿ. ಎ.ಸಿ ಹೊರಸೂಸುವ ಅಪಾಯಕಾರಿ ಅನಿಲಗಳನ್ನು ನಾವು ಈ ಮೂಲಕ ತಪ್ಪಿಸಬಹುದು. ಸಗಣಿ ಬಳಿದ ನಂತರ ನಾನು ನನ್ನ ಕಾರಿನ ಎ.ಸಿಯನ್ನು ಚಾಲೂ ಮಾಡಿಯೇ ಇಲ್ಲ,’ ಇನ್ನುತ್ತಾರೆ ಶಾ.
ಗೋಡೆ, ನೆಲ, ಮನೆ ಮುಂಭಾಗ ಸಗಣಿ ಸಾರಿಸುವುದು ಭಾರತೀಯ ಗ್ರಾಮೀಣ ಪರಂಪರೆಗಳಲ್ಲೊಂದು. ಸಗಣಿ ಸಾರಿಸುವಿಕೆಯಿಂದ ಮನೆಯ ವಾತಾವರಣ ನಿಯಂತ್ರಣದಲ್ಲಿರುತ್ತದೆ ಎಂಬುದು ಗ್ರಾಮೀಣರು ಸದಾ ಕಾಲ ಹೇಳುವ ಮಾತು ಕೂಡ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.