ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿರುವ ಗೇಮ್ ಝೋನ್‌ನಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ತಕ್ಷಣದ ಮಾಹಿತಿ ಅನ್ವಯ ಕನಿಷ್ಠ 20 ಜನ ಮೃತಪಟ್ಟಿದ್ದಾರೆ.
ಬೆಂಕಿಯ ಕೆನ್ನಾಲಿಗೆಯಿಂದ ಗೇಮ್ ಝೋನ್ ಸಂಪೂರ್ಣ ಕುಸಿದಿದೆ. ಬೀಸುವ ಗಾಳಿಯಿಂದಾಗಿ ಬೆಂಕಿ ಇನ್ನಷ್ಟು ಜೋರಾಗಿ ಉರಿಯುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೊಗೆಯ ಪ್ರಮಾಣ ಹೆಚ್ಚಾಗಿದ್ದು, ಒಳಗೆ ಸಿಲುಕಿದವರ ಚೀರಾಟ, ಹೊರಗಿದ್ದವರ ಆಕ್ರಂದನ ಮುಗಿಲುಮುಟ್ಟಿದೆ.
ಈ ಭೀಕರ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೂರು ಪ್ರಮುಖ ದುರಂತಗಳು ಸಂಭವಿಸಿವೆ. ಇದರಲ್ಲಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂತವುಗಳಲ್ಲಿ ಪ್ರಮುಖವು...
ಗುಜರಾತ್‌ನ ಮೋರ್ಬಿ ನಗರದಲ್ಲಿ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗು ಸೇತುವೆ ಕುಸಿದ ಪರಿಣಾಮ 135 ಜನ ಮೃತಪಟ್ಟಿದ್ದರು. ಈ ಸೇತುವೆ ನವೀಕರಣಗೊಂಡು ಅ. 26ರಂದು ಉದ್ಘಾಟನೆಗೊಂಡಿತ್ತು. ಇದಾಗಿ ನಾಲ್ಕೇ ದಿನಕ್ಕೆ (ನ. 1ರಂದು) ಸೇತುವೆ ಕುಸಿದಿತ್ತು.
ಈ ದುರಂತದಲ್ಲಿ ಮೃತಪಟ್ಟವರಲ್ಲಿ 47 ಜನ ಮಕ್ಕಳು ಇದ್ದರು. 230 ಮೀಟರ್ ಉದ್ದದ ಈ ಸೇತುವೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತು. ನಂತರ ಅದನ್ನು 2022ರಲ್ಲಿ ನವೀಕರಿಸಿ ಉದ್ಘಾಟಿಸಲಾಗಿತ್ತು. ಈ ಘಟನೆ ಸಂಬಂಧ 9 ಜನರನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆದಿದೆ.
ಗುಜರಾತ್‌ನ ವಡೋದರದಲ್ಲಿರುವ ಹರ್ನಿ ಕೆರೆಯಲ್ಲಿ ಜ. 18ರಂದು ಸಂಭವಿಸಿದ ದೋಣಿ ದುರಂತದಲ್ಲಿ 12 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕಿಯರು ಮೃತಪಟ್ಟಿದ್ದರು.
ಘಟನೆ ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. 2015ರಲ್ಲಿ ಗುತ್ತಿಗೆ ಪಡೆಯಲು ಅನರ್ಹವಾದ ಕೊಟಿಯ ಪ್ರಾಜೆಕ್ಟ್‌ಗೆ ಕೇವಲ 2 ತಿಂಗಳಲ್ಲಿ ಗುತ್ತಿಗೆ ಪಡೆದಿದ್ದ ಕುರಿತು ನ್ಯಾಯಾಲಯ ಸಂಶಯ ವ್ಯಕ್ತಪಡಿಸಿತ್ತು.
ಈ ದುರ್ಘಟನೆಗಳು ನೆನಪಿನಿಂದ ಮಾಸುವ ಮೊದಲೇ ರಾಜ್‌ಕೋಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.