ಅಹಮದಾಬಾದ್: ಹೊಸ ವರ್ಷದ ಮೊದಲ ದಿನವಾದ ಇಂದು (ಜ.1,2024) ಏಕಕಾಲದಲ್ಲಿ ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಗುಜರಾತ್ ರಾಜ್ಯ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದೆ.
ನಾಲ್ಕು ಸಾವಿರಕ್ಕೂ ಹೆಚ್ಚು ಜನರು, 108 ಪ್ರದೇಶಗಳಲ್ಲಿ 12 ಆಸನಗಳ ಸೂರ್ಯ ನಮಸ್ಕಾರದ 51 ಪ್ರಕಾರಗಳನ್ನು ಪ್ರದರ್ಶಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
‘ಗುಜರಾತ್ ಗಮನಾರ್ಹ ಸಾಧನೆಯೊಂದಿಗೆ 2024 ಅನ್ನು ಸ್ವಾಗತಿಸಿತು.108 ಸ್ಥಳಗಳಲ್ಲಿ ಏಕಕಾಲದಲ್ಲಿ ಅತಿ ಹೆಚ್ಚು ಜನರು ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ!. ನಮಗೆಲ್ಲರಿಗೂ ತಿಳಿದಿರುವಂತೆ, ನಮ್ಮ ಸಂಸ್ಕೃತಿಯಲ್ಲಿ 108 ಸಂಖ್ಯೆಗೆ ವಿಶೇಷ ಮಹತ್ವವಿದೆ. ಭಾರತೀಯರಿಗೆ ಮಹತ್ವದ ಸ್ಥಳ ಎನಿಸಿಕೊಂಡ ಮೊಟೆರಾ ಸೂರ್ಯ ದೇವಾಲಯದಲ್ಲಿಯೂ ಸೂರ್ಯ ನಮಸ್ಕಾರ ಮಾಡಲಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆಗೆ, ನಮ್ಮ ಬದ್ಧತೆಗೆ ಇದು ನಿಜಕ್ಕೂ ಸಾಕ್ಷಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ಸೂರ್ಯ ನಮಸ್ಕಾರವನ್ನು ದಿನನಿತ್ಯದ ಅಭ್ಯಾಸವಾಗಿಸಿಕೊಳ್ಳಿ, ಇದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು ಎಂದು ಜನತೆಗೆ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು, ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ಜನ ಪಾಲ್ಗೊಂಡಿದ್ದರು ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.