ಗಾಂಧಿನಗರ: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕಿರಿಯ ಗುಮಾಸ್ತ ಹುದ್ದೆ ನೇಮಕಾತಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಗುಜರಾತ್ ಪಂಚಾಯತ್ ಸೇವಾ ಆಯ್ಕೆ ಮಂಡಳಿ (ಜಿಪಿಎಸ್ಎಸ್‌ಬಿ) ಕಾರ್ಯದರ್ಶಿ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಪರೀಕ್ಷೆಯು ಇಂದು (ಭಾನುವಾರ) ಬೆಳಗ್ಗೆ 11ಕ್ಕೆ ನಿಗದಿಯಾಗಿತ್ತು.
'ಕಿರಿಯ ಗುಮಾಸ್ತ ಹುದ್ದೆ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಪೊಲೀಸರು ಮಂಡಳಿಗೆ ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ಪರೀಕ್ಷಾ ಕೇಂದ್ರಗಳನ್ನು ತಲುಪದಂತೆ ಎಲ್ಲ ಹುದ್ದೆ ಆಕಾಂಕ್ಷಿಗಳಿಗೆ ಮಂಡಳಿಯು ಮನವಿ ಮಾಡುತ್ತದೆ. ಪರೀಕ್ಷೆ ಬದಲಾದ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು' ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
ವಿದ್ಯಾರ್ಥಿ ನಾಯಕ ಹಾಗೂ ಈ ಹಿಂದೆ ಹಲವು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಗಳನ್ನು ಬಯಲಿಗೆಳೆದಿದ್ದ ಯುವರಾಜ್ ಸಿನ್ಹ ಜಡೇಜಾ ಎನ್ನುವವರು, 'ರಾಜ್ಯ ಸರ್ಕಾರವು ಹಿಂದಿನ ಅನುಭವಗಳಿಂದ ಯಾವುದೇ ಪಾಠ ಕಲಿತಿಲ್ಲ. ಇದರಿಂದಾಗಿ ಲಕ್ಷಾಂತರ ನಿರುದ್ಯೋಗಿ ಯುವಕರು ಸಂಕಷ್ಟಕ್ಕೀಡಾಗಿದ್ದಾರೆ' ಎಂದು ಕಿಡಿಕಾರಿದ್ದಾರೆ.
ಖಾಲಿಯಿರುವ 1,150 ಹುದ್ದೆಗಳಿಗೆ 9.5 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಾದ್ಯಂತ ಒಟ್ಟು 2,995 ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 70,000 ಪರೀಕ್ಷಾ ಸಿಬ್ಬಂದಿ ಹಾಗೂ 7,500 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.
15 ಆರೋಪಿಗಳು ವಶಕ್ಕೆ
ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 15 ಶಂಕಿತ ಆರೋಪಿಗಳನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಶಕ್ಕೆ ಪಡೆದಿದೆ. ಹೆಚ್ಚಿನವರು ವಡೋದರದವರಾಗಿದ್ದಾರೆ. ಪ್ರಮುಖ ಆರೋಪಿಯು ಈ ಹಿಂದೆ ಒಡಿಶಾದಲ್ಲಿ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ಈ ಜಾಲದಲ್ಲಿ ಭಾಗಿಯಾಗಿರುವ ಹೆಚ್ಚಿನ ಆರೋಪಿಗಳನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದ್ದು, ತೆಲಂಗಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ದೆಹಲಿಗೆ ಕಳುಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.