ಅಹ್ಮದಾಬಾದ್: ಪೂರ್ವ ಗುಜರಾತ್‌ನ ಬುಡಕಟ್ಟು ಸಮುದಾಯದವರೇ ಪ್ರಧಾನವಾಗಿರುವ ಡಾಂಗ್ ಜಿಲ್ಲೆಯನ್ನು ಸಂಪೂರ್ಣ ಸಾವಯವ ಕೃಷಿ ಜಿಲ್ಲೆ ಎಂದು ಘೋಷಿಸಲಾಗುವುದು ಎಂದು ಕೃಷಿ ಸಚಿವ ರಾಘವ್‌ಜಿ ಪಟೇಲ್ ಮಂಗಳವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಶ್ಚಿಮ ಭಾರತದಲ್ಲೇ ಇದೇ ಮೊದಲ ಬಾರಿಗೆ ಗುಜರಾತ್‌ನ ಡಂಗ್ ಜಿಲ್ಲೆಯನ್ನು ಸಂಪೂರ್ಣ ಸಾವಯವ ಕೃಷಿ ಜಿಲ್ಲೆ ಎಂದು ನವೆಂಬರ್ 19 ರಂದು ನಡೆಯುವ ಸಮಾರಂಭದಲ್ಲಿ ರಾಜ್ಯಪಾಲರು ಘೋಷಿಸಲಿದ್ದಾರೆ’ ಎಂದು ಅವರು ಹೇಳಿದರು.
’ಈ ಜಿಲ್ಲೆಯ ರೈತರು ರಸಗೊಬ್ಬರ ಮತ್ತು ಕೀಟನಾಶಕ ಮುಕ್ತ ಕೃಷಿ ತಂತ್ರಗಳನ್ನು ಅನುಸರಿಸುತ್ತಿದ್ದಾರೆ’ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
’ಜಿಲ್ಲೆಯಲ್ಲಿ ಗರಿಷ್ಠ ಎರಡು ಹೆಕ್ಟೇರ್ ಜಮೀನು ಹೊಂದಿರುವ ಪ್ರತಿ ರೈತರಿಗೆ ಸಾವಯವ ಕೃಷಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹ ಧನ ನೀಡುತ್ತಿದೆ’ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರ ಪ್ರತಿ ವರ್ಷ 38 ರಿಂದ 40 ಲಕ್ಷ ಟನ್‌ನಷ್ಟು ರಸಗೊಬ್ಬರವನ್ನು ಬಳಕೆ ಮಾಡುತ್ತಿತ್ತು. ಇದಕ್ಕೆ ಸರ್ಕಾರ ₹4200 ಕೋಟಿಯಿಂದ ₹4300 ಕೋಟಿ ವರೆಗೂ ಸಬ್ಸಿಡಿ ನೀಡುತ್ತಿತ್ತು. ಹೀಗಿದ್ದರೂ ಈ ಜಿಲ್ಲೆಯ ಕೃಷಿಕರು ಮಾತ್ರ ಸಾವಯವ ಕೃಷಿಗೇ ಒತ್ತು ನೀಡಿದರು’ ಎಂದರು.
ಡಾಂಗ್ ಜಿಲ್ಲೆಯ ಜಿಲ್ಲಾಧಿಕಾರಿ ಬಿ.ಕೆ. ಪಾಂಡ್ಯ, ’ಜಿಲ್ಲೆಯಲ್ಲಿ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಇದೆ. ಇಲ್ಲಿನ ಶೇ 70 ರಿಂದ 80ರಷ್ಟು ರೈತರು ಮೂಲವಾಗಿ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನೇ ಅನುಸರಿಸುತ್ತಿದ್ದು, ಇವರ‍್ಯಾರಿಗೂ ರಸಗೊಬ್ಬರ ಮತ್ತು ಕೀಟನಾಶಕಗಳ ಅವಶ್ಯಕತೆಯೇ ಇಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.