ಮೊರ್ಬಿ(ಗುಜರಾತ್):ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಭಾನುವಾರ ಸಂಜೆ ಮುರಿದು ಬಿದ್ದು 135 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 185 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಮತ್ತಷ್ಟು ಜನರು ನಾಪತ್ತೆಯಾಗಿದ್ದು, ಮುಂದಿನ 24 ಗಂಟೆ ವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ದುರಂತದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವಬಿಜೆಪಿಯ ಮಾಜಿ ಶಾಸಕ ಕಂಟಿಲಾಲ್ ಅಮೃತಿಯಾ, ಈವರೆಗೆ 135 ಮಂದಿ ಮೃತಪಟ್ಟಿದ್ದಾರೆ. ತಮ್ಮ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂದು ಮತ್ತಷ್ಟು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್), ಅಗ್ನಿಶಾಮಕ ದಳ, ಮುಳುಗು ತಜ್ಞರು ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ರಾಜ್‌ಕೋಟ್ ಜಿಲ್ಲಾಧಿಕಾರಿ ಅರುಣ್ ಮಹೇಶ್ ಬಾಬು ಅವರೂ ಮೊರ್ಬಿಯಲ್ಲಿ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯ ಆಡಳಿತದ ಜೊತೆ ಕೈ ಜೋಡಿಸಿದ್ದಾರೆ.
ದುರಂತದ ಸ್ಥಳದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಚೆಕ್‌ಡ್ಯಾಂ ತೆರೆಯಲಾಗಿದೆ. ನೀರಿನ ಮಟ್ಟ ಕಡಿಮೆಯಾದರೆ, ಕಾರ್ಯಾಚರಣೆಗೆ ಅನುಕೂಲವಾಗುತ್ತದೆ. ಮುಂದಿನ 24ಗಂಟೆ ವರೆಗೆ ಶೋಧ ಕಾರ್ಯಾಚರಣೆ ಮುಂದುವರಿಸಬೇಕಾಗಬಹುದು ಎಂದು ಅವರುಮಾಹಿತಿ ನೀಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಮೊರ್ಬಿ ಪಟ್ಟಣದಲ್ಲಿ ಸೋಮವಾರ ಸ್ವಯಂಪ್ರೇರಿತ ಬಂದ್ ಆಚರಿಸಲಾಗುವುದು.
19ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ 230 ಮೀಟರ್ ಉದ್ದದ ಈ ಸೇತುವೆಯನ್ನು ನವೀಕರಣದ ಸಲುವಾಗಿ ಕಳೆದ ಆರು ತಿಂಗಳಿನಿಂದ ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ (ಅಕ್ಟೋಬರ್ 26) ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು.
ಇವನ್ನೂ ಓದಿ
*ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ತೂಗುಸೇತುವೆ ಕುಸಿತ: 78 ಮಂದಿ ಸಾವು
*ತೂಗುಸೇತುವೆ ದುರಂತಕ್ಕೆ ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಸಿಪಿಐ ಟೀಕೆ
*ಮೊರ್ಬಿ ತೂಗು ಸೇತುವೆ ದುರಂತ: ಮೃತರ ಕುಟುಂಬಕ್ಕೆ ₹4 ಲಕ್ಷ ಪರಿಹಾರ
*ಗುಜರಾತ್ | 'ಫಿಟ್ನೆಸ್' ಪ್ರಮಾಣಪತ್ರವಿಲ್ಲದೆತೂಗುಸೇತುವೆ ಸಂಚಾರಕ್ಕೆ ಮುಕ್ತ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.