ಜೈಪುರ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಗುಜ್ಜಾರ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಜೈಪುರ ಮತ್ತು ಆಗ್ರಾಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–11ರಲ್ಲಿ ಪ್ರತಿಭಟನಕಾರರು ವಾಹನ ಸಂಚಾರ ತಡೆ ಉಂಟು ಮಾಡಿದರು. ರಾಜ್ಯದ ವಿವಿಧೆಡೆಗಳಲ್ಲಿ ರೈಲಿಗೆ ತಡೆ ಒಡ್ಡಿದ ಕಾರಣ, 250ಕ್ಕೂ ಹೆಚ್ಚಿನ ರೈಲಿನ ಸಂಚಾರದಲ್ಲಿ ವ್ಯತ್ಯಯಗೊಂಡಿದೆ.
’ದೌಸಾ ಜಿಲ್ಲೆಯ ಸಿಕಾಂದಾರದಲ್ಲಿ ಎನ್‌ಎಚ್ –11ನ್ನು ತಡೆಹಿಡಿಯಲಾಗಿತ್ತು. ಬುಂದಿ ಜಿಲ್ಲೆಯ ನೈನ್ವಾ ಮತ್ತು ಕರೌಲಿ ಜಿಲ್ಲೆಯ ಬುದ್ಲಾ ಗ್ರಾಮದಲ್ಲಿ ರಸ್ತೆ ತಡೆ ಮಾಡಲಾಗಿತ್ತು‘ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ ) ವಿಭಾಗದ ಎಂ.ಎಲ್.ಲಥಾರ್ ತಿಳಿಸಿದರು.
ಹೆದ್ದಾರಿಯಲ್ಲೇ ನಿಂತಿದ್ದ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೌಸಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಸಿಂಗ್ ತಿಳಿಸಿದರು.
ನಿಷೇಧಾಜ್ಞೆ ಮುಂದುವರಿಕೆ: ಧೋಲ್‌ಪುರ ಜಿಲ್ಲೆಯಲ್ಲಿ ಭಾನುವಾರ ಪ್ರತಿಭಟನಕಾರರು ಪೊಲೀಸರ ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಮುಂಜಾಗ್ರತ ಕ್ರಮವಾಗಿ ಧೋಲ್‌ಪುರ ಮತ್ತು ಕರೌಲಿ ಜಿಲ್ಲೆಯಲ್ಲಿ ಜಾರಿಗೊಳಿಸಿದ್ದ 144ರ ಕಲಂ ಅನ್ವಯ ನಿಷೇಧಾಜ್ಞೆಯನ್ನು ಸೋಮವಾರ ಕೂಡ ಮುಂದುವರಿಸಲಾಯಿತು.
’ಗುಜ್ಜಾರ್, ಗದಿಯಾ ಲುಹಾರ್, ಬಂಜಾರಾ, ಬದಾರಿಯಾ, ರೈಕಾ ರೆಬಾರಿ ಸಮುದಾಯಗಳಿಗೆ ಶೇಕಡಾ 5ರಷ್ಟು ಮೀಸಲಾತಿ ನಿರ್ಧಾರ ಘೋಷಿಸುವ ತನಕ ರೈಲು ಹಳಿಗಳನ್ನು ಬಿಟ್ಟು ಕದಲುವುದಿಲ್ಲ‘ ಗುಜ್ಜಾರ್ ನಾಯಕ ಕಿರೋರಿ ಸಿಂಗ್ ಬೈಂಸ್ಲಾ ಅವರ ಮಗ ವಿಜಯ್‌ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.