ADVERTISEMENT

ಗುಜ್ಜರ್‌ ಮೀಸಲು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಕಾರ

ಗುಜ್ಜರ್‌ ಮೀಸಲಾತಿ ಪ್ರಶ್ನಿಸಿ ಅರ್ಜಿ

ಪಿಟಿಐ
Published 5 ಏಪ್ರಿಲ್ 2019, 18:29 IST
Last Updated 5 ಏಪ್ರಿಲ್ 2019, 18:29 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಗುಜ್ಜರ್‌ ಮತ್ತು ಇತರ ನಾಲ್ಕು ಜಾತಿಯ ಜನರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ 5ರಷ್ಟು ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಈ ಸಮುದಾಯದವರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರು ಎಂದು ಪರಿಗಣಿಸಿ ಫೆ. 13ರಂದು ರಾಜಸ್ಥಾನ ಸರ್ಕಾರವು ಕಾನೂನು ತಿದ್ದುಪಡಿಯ ಮೂಲಕ ವಿಶೇಷ ಮೀಸಲಾತಿ ಕಲ್ಪಿಸಿತ್ತು. ಗುಜ್ಜರ್‌, ಬಂಜಾರ, ಗಡಿಯಾ ಲೋಹರ್‌, ರೈಕಾ ಮತ್ತು ಗಡಾರಿಯಾ ಸಮುದಾಯಗಳು ಈ ಮೀಸಲಾತಿ ಸೌಲಭ್ಯ ಪಡೆದಿವೆ. ಇದನ್ನು ಪ್ರಶ್ನಿಸಿ ಅರವಿಂದ್‌ ಶರ್ಮಾ ಮತ್ತು ಬಾದಲ್‌ ವರ್ಮಾ ಎಂಬುವವರು ಅಲ್ಲಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿತ್ತು.

ಈ ರೀತಿ ಸೌಲಭ್ಯ ಕಲ್ಪಿಸಿರುವುದು ಮೀಸಲಾತಿ ನಿಯಮದ ಉಲ್ಲಂಘನೆ. ಮೀಸಲಾತಿಯು ಒಟ್ಟಾರೆ ಕೋಟಾದ ಶೇ 50ನ್ನು ಮೀರಬಾರದು. ಆದರೆ ಇವರಿಗೆ ಶೇ 5ರ ಮೀಸಲಾತಿ ಕಲ್ಪಿಸಿರುವ ಕಾರಣ ಆ ನಿಯಮದ ಉಲ್ಲಂಘನೆಯಾದಂತಾಗುತ್ತದೆ ಎಂಬುದು ಅರ್ಜಿದಾರರ ವಾದವಾಗಿತ್ತು.

ADVERTISEMENT

‘ಈ ಸಮುದಾಯಗಳು ಜನಸಂಖ್ಯೆಯ ಆಧಾರದಲ್ಲಷ್ಟೇ ಮೀಸಲಾತಿ ಕೇಳುತ್ತಿವೆ. ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಗಾಗಿ ಅಥವಾ ಉದ್ಯೋಗಕ್ಕಾಗಿ ಅಲ್ಲ’ ಎಂದು ಅರ್ಜಿದಾರರು ವಾದಿಸಿದ್ದರು.

‘ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ ನಿಮ್ಮ ಮನವಿಯ ವಿಚಾರಣೆ ಇನ್ನೂ ಹೈಕೋರ್ಟ್‌ನಲ್ಲೇ ಬಾಕಿ ಇದೆ. ಈ ಸಂದರ್ಭದಲ್ಲಿ ನಾವು ಈ ಅರ್ಜಿಯ ವಿಚಾರಣೆಗೆ ಮುಂದಾಗಲಾಗದು ಎಂದು ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಮತ್ತು ಸಂಜೀವ್‌ ಖನ್ನಾ ಅವರಿದ್ದ ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.