ಅಹಮದಾಬಾದ್: 2004ರ ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಿಂದ ಪೊಲೀಸ್ ಅಧಿಕಾರಿಗಳಾದ ಜಿ.ಎಲ್ ಸಿಂಘಾಲ್, ತರುಣ್ ಬರೋಟ್ ಮತ್ತು ಅನಾಜು ಚೌಧರಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ಕೈಬಿಟ್ಟಿದೆ.
ವಿಶೇಷ ಸಿಬಿಐ ನ್ಯಾಯಧೀಶ ವಿ.ಆರ್ ರಾವಲ್ ಅವರು ಈ ಮೂವರು ಅಧಿಕಾರಿಗಳನ್ನು ಪ್ರಕರಣದಿಂದ ಕೈಬಿಡುವ ಅರ್ಜಿಗೆ ಸಮ್ಮತಿ ಸೂಚಿಸಿದರು.
‘ಗುಜರಾತ್ ಸರ್ಕಾರವು ಈ ಮೂವರು ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನಿರಾಕರಿಸಿತ್ತು’ ಎಂದು ಮಾರ್ಚ್ 20ರಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತ್ತು.
2004ರ ಜೂನ್ 15ರಂದು ಮುಂಬೈಯ ಇಶ್ರತ್ ಜಹಾನ್ ಮತ್ತು ಆಕೆಯ ಮೂವರು ಸ್ನೇಹಿತರಾದ ಜಾವೇದ್ ಶೇಖ್ ಅಲಿಯಾಸ್ ಪ್ರಣೇಶ್ ಪಿಲೈ, ಅಮ್ಜದಲಿ ಅಕ್ಬರಲಿ ರಾಣಾ ಮತ್ತು ಜಿಶಾನ್ ಜೋಹರ್ ಅವರನ್ನು ಗುಜರಾತ್ ಪೊಲೀಸರು ಅಹಮದಾಬಾದ್‌ನ ಬಳಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.
‘ಈ ನಾಲ್ವರೂ ಪಾಕಿಸ್ತಾನದ ಉಗ್ರ ಸಂಘಟನೆಗೆ ಸೇರಿದವರು. ಆರೋಪಿಗಳು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ಹೂಡಿದ್ದರು’ ಎಂದು ಅವರು ಆರೋಪಿಸಿದ್ದರು.
ಆದರೆ ಹೈಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡವು ಇದನ್ನು ನಕಲಿ ಎನ್‌ಕೌಂಟರ್ ಎಂದು ದೂರಿತ್ತು. ಬಳಿಕ ಈ ಮೂವರು ಪೊಲೀಸ್ ಅಧಿಕಾರಿಗಳ ಸಹಿತ ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.