ADVERTISEMENT

Jammu | ಡೋಡಾ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಚಕಮಕಿ, ಇಬ್ಬರು ಯೋಧರಿಗೆ ಗಾಯ

ಪಿಟಿಐ
Published 18 ಜುಲೈ 2024, 11:00 IST
Last Updated 18 ಜುಲೈ 2024, 11:00 IST
<div class="paragraphs"><p>ಭದ್ರತಾ ಪಡೆ</p></div>

ಭದ್ರತಾ ಪಡೆ

   

(ಪಿಟಿಐ ಚಿತ್ರ)

ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ. ಉಗ್ರರು ಹಾರಿಸಿದ ಗುಂಡು ತಗುಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ADVERTISEMENT

ಕಾಸ್ತಿಗಢದ ಜದ್ದಾನ್ ಬಾಟ ಗ್ರಾಮ ಅರಣ್ಯ ಪ್ರದೇಶದಲ್ಲಿ ತಡ ರಾತ್ರಿ 2 ಸುಮಾರು ಗಂಟೆಗೆ ಭದ್ರತಾ ಪಡೆ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಭದ್ರತಾ ಶಿಬಿರದ ಮೇಲೆ ಭಯೋತ್ಪಾದಕರ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರನ್ನು ಮಟ್ಟ ಹಾಕಲು ಭದ್ರತಾ ಪಡೆ ಸತತ ನಾಲ್ಕನೇ ದಿನವೂ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಎರಡೂ ಕಡೆಯಿಂದ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಹೇಳಿದ್ದಾರೆ.

ದೇಸಾ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಮುಂಜಾನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ಬ್ರಿಜೇಶ್‌ ಥಾಪಾ, ಒಬ್ಬ ಪೊಲೀಸ್‌ ಸೇರಿದಂತೆ ನಾಲ್ವರು ಸೇನೆಯ ಸಿಬ್ಬಂದಿ ಹುತಾತ್ಮರಾಗಿದ್ದರು.

ಈ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ, ಕಗ್ಗತ್ತಲು ಮತ್ತು ಕಠಿಣ ಭೂಪ್ರದೇಶದ ನಡುವೆಯೂ ಉಗ್ರರನ್ನು ಸದೆಬಡಿಯಲು ಭದ್ರತಾ ಪಡೆ ಬೃಹತ್ ಕಾರ್ಯಾಚರಣೆಯನ್ನು ನಡೆಸುತ್ತಿದೆ.

2005ರಲ್ಲಿ ಡೋಡಾ ಜಿಲ್ಲೆಯನ್ನು ಉಗ್ರ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿತ್ತು. ಆದರೆ ಈ ವರ್ಷ ಜೂನ್ 12ರ ಬಳಿಕ ಉಗ್ರರ ಸರಣಿ ದಾಳಿ ಮುಂದುವರಿದಿದೆ.

ನುಸುಳುವಿಕೆಗೆ ಯತ್ನ: ಇಬ್ಬರು ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾಡ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಒಳ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಗುರುವಾರ ಹೊಡೆದುರುಳಿಸಿವೆ.  ಕುಪ್ವಾಡ ಜಿಲ್ಲೆಯ ಕೆರನ್ ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದ್ದು ಇಬ್ಬರು ಉಗ್ರರನ್ನು ಯೋಧರು ಹತ್ಯೆ ಮಾಡಿದ್ದಾರೆ. ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.