ADVERTISEMENT

ಕರ್ತಾರ್‌ಪುರ ಗುರುದ್ವಾರ ಸಾಕಾರ: ಪಾಕ್ ಪ್ರಧಾನಿಯಿಂದ ನಾಳೆ ಉದ್ಘಾಟನೆ

ಸಿಖ್ ಸಮುದಾಯದ ಯಾತ್ರಿಕರಿಗೆ ನೇರ ದರ್ಶನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 20:30 IST
Last Updated 7 ನವೆಂಬರ್ 2019, 20:30 IST
.
.   

ಸಿಖ್ ಪಂಥದ ಸ್ಥಾಪಕ ಗುರುನಾನಕ್ ಅವರು ನಿರ್ಮಿಸಿದ್ದ ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ಗುರುದ್ವಾರಕ್ಕೆ ಭಾರತೀಯರು ಇನ್ನು ನೇರವಾಗಿ ಪ್ರವೇಶಿಸಲು ಸಾಧ್ಯ. ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕರ್ತಾರ್‌ಪುರ ಕಾರಿಡಾರ್’ ಅನ್ನು ನ. 9 ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ.

ಗುರುನಾನಕ್ ಅವರ 550ನೇ ಜನ್ಮದಿನಕ್ಕೂ (ನವೆಂಬರ್ 12) ಮುನ್ನ ಕಾರಿಡಾರ್ ಬಳಕೆಗೆ ಲಭ್ಯವಾಗಲಿದ್ದು, ಸಿಖ್ ಸಮುದಾಯದ ದಶಕಗಳ ಬೇಡಿಕೆ ಕಾರ್ಯರೂಪಕ್ಕೆ ಬರುತ್ತಿದೆ.

ಪ್ರಸ್ತುತ ಭಾರತದ ಯಾತ್ರಿಕರು ಲಾಹೋರ್ ಮೂಲಕ ಕರ್ತಾರ್‌ಪುರ ತಲುಪಲು ಬಸ್‌ನಲ್ಲಿ 125 ಕಿ.ಮೀ ಪ್ರಯಾಣಿಸಬೇಕಿದೆ.

ADVERTISEMENT

ಸೇವಾಶುಲ್ಕ20 ಡಾಲರ್
ಪ್ರತಿ ಯಾತ್ರಾರ್ಥಿಯು ಒಂದು ದಿನದ ಭೇಟಿಗೆ ಸೇವಾ ಶುಲ್ಕವಾಗಿ 20 ಅಮೆರಿಕನ್ ಡಾಲರ್ (ಸುಮಾರು ₹1,400) ಅನ್ನು ಪಾಕಿಸ್ತಾನಕ್ಕೆ ಪಾವತಿಸಬೇಕಿದೆ. ಈ ದರವನ್ನು ತೆಗೆದುಹಾಕುವಂತೆ ಭಾರತ ಒತ್ತಾಯಿಸಿದ್ದು, ಇನ್ನಷ್ಟೇ ಸ್ಪಷ್ಟ ನಿರ್ಧಾರ ಪ್ರಕಟವಾಗಬೇಕಿದೆ.

ಕಾರಿಡಾರ್‌ನಲ್ಲಿ...
ಅಂತರರಾಷ್ಟ್ರೀಯ ಗುಣಮಟ್ಟದ ಹೋಟೆಲ್, ನೂರಾರು ಅಪಾರ್ಟ್‌ಮೆಂಟ್‌ಗಳು, ಎರಡು ವಾಣಿಜ್ಯ ಕೇಂದ್ರ, ಎರಡು ಕಾರು ನಿಲುಗಡೆ ತಾಣಗಳು, ವಿದ್ಯುತ್ ಕೇಂದ್ರ, ಪ್ರವಾಸಿ ಮಾಹಿತಿ ಕೇಂದ್ರ, ಸರ್ಕಾರಿ ಕಚೇರಿಗಳನ್ನು ಯೋಜನೆ ಒಳಗೊಂಡಿದೆ.

ಖಲಿಸ್ತಾನ್ ಬೆಂಬಲಿಗರ ಆತಂಕ
ಪಾಕಿಸ್ತಾನ ಬೆಂಬಲಿತ ಖಲಿಸ್ತಾನ್ ಪರ ಪ್ರತ್ಯೇಕತಾವಾದಿ ಚಳವಳಿಗೆ ಕರ್ತಾರ್‌ಪುರ ಗುರುದ್ವಾರವು ಬಳಕೆಯಾಗುವ ಆತಂಕವನ್ನು ಭಾರತ ವ್ಯಕ್ತಪಡಿಸಿದೆ. ಪಾಕಿಸ್ತಾನದ ಸಿಖ್ ಗುರುದ್ವಾರ ಪ್ರತಿಬಂಧಕ ಸಮಿತಿಯ ಕೆಲ ಸಿಬ್ಬಂದಿ ಖಲಿಸ್ತಾನ್ ಪರ ಚಳವಳಿಯಲ್ಲಿ ಗುರುತಿಸಿಕೊಂಡಿದ್ದು, ಗುರುದ್ವಾರದ ಪ್ರವರ್ತಕರೂ ಆಗಿದ್ದಾರೆ ಎಂಬುದು ಆತಂಕವನ್ನು ಹೆಚ್ಚಿಸಿದೆ.

‍‍ಪಾಕಿಸ್ತಾನಕ್ಕೆ ಏನು ಲಾಭ...
* ಪಾಕಿಸ್ತಾನದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ
* ಯಾತ್ರಾರ್ಥಿಗಳ ಭೇಟಿಯಿಂದ ಸ್ಥಳೀಯ ಆರ್ಥಿಕತೆಗೆ ನೆರವು
* ಪಾಕ್ ಸರ್ಕಾರವು ಯಾತ್ರಿಕರ ಭೇಟಿಯಿಂದ 3.6 ಕೋಟಿ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ ಗಳಿಸುತ್ತದೆ
* ಸಂಚಾರ, ಆತಿಥ್ಯ ಸೇರಿ ವಿವಿಧ ವಲಯಗಳಲ್ಲಿ ಉದ್ಯೋಗ ಸೃಷ್ಟಿ
* ಭಾರತದ ಜತೆಗಿನ ಉದ್ವಿಗ್ನ ಸ್ಥಿತಿ ಶಮನಕ್ಕೆ ನೆರವಾಗಬಹುದು

ವೀಸಾ ಬೇಕಿಲ್ಲ!
* ಕರ್ತಾರ್‌ಪುರಕ್ಕೆ ಭೇಟಿ ನೀಡುವ ಭಾರತದ ಸಿಖ್ ಯಾತ್ರಿಗಳಿಗೆ ವೀಸಾ ಬೇಕಿಲ್ಲ
* ಒಸಿಐ ಕಾರ್ಡ್ ಹೊಂದಿರುವ ಅನಿವಾಸಿ ಭಾರತೀಯರೂ ಭೇಟಿ ನೀಡಬಹುದು
* ವರ್ಷಪೂರ್ತಿ ಅಂದರೆ ವಾರದ ಏಳೂ ದಿನ ಯಾತ್ರಿಕರ ಭೇಟಿಗೆ ಅವಕಾಶ
* ವೈಯಕ್ತಿಕವಾಗಿ ಅಥವಾ ಗುಂಪಿನಲ್ಲಿ ತೆರಳಲು ಅವಕಾಶ
* ₹ 11 ಸಾವಿರ ಹಣ, 7 ಕೆ.ಜಿ ತೂಕದ ಬ್ಯಾಗ್‌ ಒಯ್ಯಬಹುದು
* ಬಯೋಮೆಟ್ರಿಕ್ ತಪಾಸಣೆಗೆ ಯಾತ್ರಿಕರು ಒಳಗಾಗಬೇಕಿದೆ
* 10 ದಿನಗಳ ಮುನ್ನವೇ ಯಾತ್ರಿಕರ ಪಟ್ಟಿಯನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು
* 88 ಉಭಯ ದೇಶಗಳ ಗಡಿಯಲ್ಲಿ ತೆರೆಯಲಾಗಿರುವ ವಲಸೆ ಕೇಂದ್ರಗಳು

ಚರಿತ್ರೆಯ ಪುಟಗಳಲ್ಲಿ...
ಸಿಖ್ ಪಂಥದ ಸ್ಥಾಪಕ ಗುರುನಾನಕ್ ಅವರು ಕರ್ತಾರ್‌ಪುರದಲ್ಲಿ 18 ವರ್ಷ ವಾಸಿಸಿದ್ದರು. 1539ರಲ್ಲಿ ಕಾಲವಾದ ಬಳಿಕ ಗುರುನಾನಕ್ ತಮ್ಮವರು ಎಂದು ಹಿಂದೂ, ಮುಸ್ಲಿಮರು ವಾದಿಸಿದರು. ಪ್ರತ್ಯೇಕ ಸಮಾಧಿಗಳನ್ನೂ ನಿರ್ಮಿಸಿದರು. ಆದರೆ ರಾವಿ ನದಿ ಪ್ರವಾಹದಲ್ಲಿ ಸಮಾಧಿಗಳು ಕೊಚ್ಚಿಹೋದವು.

ಕಾಲಾನಂತರದಲ್ಲಿ ಗುರುನಾನಕ್ ಅನುಯಾಯಿಗಳ ಪಂಗಡವು ನದಿಯ ಎಡಭಾಗದಲ್ಲಿ ಹುಟ್ಟಿಕೊಂಡಿತು. ಈ ಪಂಗಡವನ್ನು ಈಗ ಡೇರಾ ಬಾಬಾ ನಾನಕ್ ಎಂದು ಗುರುತಿಸಲಾಗುತ್ತಿದೆ. 1947ರಲ್ಲಿ ಭಾರತ ವಿಭಜನೆಯ ವೇಳೆ ನದಿಯ ಬಲಭಾಗದ ಶಕರ್‌ಗಡ ತಹಶೀಲ್‌ಗೆ ಒಳಪಡುವ ಕರ್ತಾರ್‌ಪುರವು ಪಾಕಿಸ್ತಾನಕ್ಕೆ ಸೇರಿತು.

ಎಡಭಾಗದ ಗುರುದಾಸ್‌ಪುರ ತಹಶೀಲ್ ಭಾರತಕ್ಕೆ ಸೇರಿತು. ನದಿಗೆ ನಿರ್ಮಿಸಿದ್ದ ಸೇತುವೆಯನ್ನು ದಾಟಿಕೊಂಡು ಭಾರತದ ಯಾತ್ರಿಕರು ಆಗಾಗ್ಗೆ ಕರ್ತಾರ್‌ಪುರಕ್ಕೆ ಹೋಗಿ ಬರುತ್ತಿದ್ದರು. ಆದರೆ 1965ರ ಭಾರತ–ಪಾಕ್ ಯುದ್ಧದಲ್ಲಿ ಸೇತುವೆಯೂ ಧ್ವಂಸಗೊಂಡಿತು.

1948: ಕರ್ತಾರ್‌ಪುರದ ಗುರುದ್ವಾರ ವಶಪಡಿಸಿಕೊಳ್ಳಲು ಅಕಾಲಿದಳ ಆಗ್ರಹ

1969: ಗುರುನಾನಕ್ ಅವರ 500ನೇ ಜಯಂತಿ ವೇಳೆ ಕರ್ತಾರ್‌ಪುರವನ್ನು ಭಾರತಕ್ಕೆ ಸೇರಿಸುವಂತೆ ಪಾಕ್‌ಗೆ ಮನವಿ ಮಾಡುವುದಾಗಿ ಪ್ರಧಾನಿ ಇಂದಿರಾಗಾಂಧಿ ಭರವಸೆ

1974: ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಶಿಷ್ಟಾಚಾರ ಸಂಬಂಧಒಪ್ಪಂದಕ್ಕೆ ಭಾರತ–ಪಾಕ್ ಸಹಿ

1998: ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್‌ಗೆ ಬಸ್ ಆರಂಭಿಸಿದ್ದ ಸಮಯದಲ್ಲಿ ಕಾರಿಡಾರ್‌ ನಿರ್ಮಾಣದ ಚರ್ಚೆ

1999: ಕರ್ತಾರ್‌ಪುರ ಸಾಹಿಬ್ ಗುರುದ್ವಾರ ಜೀರ್ಣೋದ್ಧಾರ ಮಾಡಿದ ಪಾಕ್ ಭಾರತದ ಕಡೆಯಿಂದ ವೀಕ್ಷಿಸಲು ಅವಕಾಶ

2004: ಡಾ. ಮನಮೋಹನ್ ಸಿಂಗ್ ಅವರಿಂದ ಕಾರಿಡಾರ್ ಪ್ರಸ್ತಾಪ.ಪಾಕ್ ಜತೆ ಮಾತುಕತೆ

2008: ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರಿಂದ ವೀಸಾರಹಿತ ಭೇಟಿ ಪ್ರಸ್ತಾವ; ಮುಂಬೈ ದಾಳಿ ಕಾರಣ ಚರ್ಚೆ ನನೆಗುದಿಗೆ

2010: ವಾಷಿಂಗ್ಟನ್‌ನ ಸಿಖ್ ಸಮುದಾಯದಿಂದ ಕಾರ್ಯಸಾಧ್ಯತಾ
ಅಧ್ಯಯನ ವರದಿ ಪ್ರಕಟ

2010: ನವೆಂಬರ್‌ನಲ್ಲಿ ಕಾರಿಡಾರ್ ನಿರ್ಮಾಣ ಸಂಬಂಧ ಪಂಜಾಬ್ ಸರ್ಕಾರದಿಂದ ನಿರ್ಣಯ ಅಂಗೀಕಾರ, ಕೇಂದ್ರ ಸರ್ಕಾರಕ್ಕೆ ರವಾನೆ

2018: ನವಜೋತ್ ಸಿಂಗ್ ಸಿಧು ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣವಚನದಲ್ಲಿ ಭಾಗಿ. ಗುರುನಾನಕ್ ಅವರ 550ನೇ ಜನ್ಮದಿನದ ಹೊತ್ತಿಗೆ ಕಾರಿಡಾರ್ ನಿರ್ಮಾಣದ ಭರವಸೆ ನೀಡಿದ ಪಾಕ್ ಸೇನೆ ಮುಖ್ಯಸ್ಥ ಬಾಜ್ವಾ

2018:ನವೆಂಬರ್‌ನಲ್ಲಿ ಕರ್ತಾರ್‌ಪುರಕ್ಕೆ ಕಾರಿಡಾರ್‌ ನಿರ್ಮಾಣ ಕಾಮಗಾರಿಗೆ ಭಾರತದ ಕಡೆ ಶಂಕುಸ್ಥಾಪನೆ ನೆರವೇರಿಸಿದ ವೆಂಕಯ್ಯ ನಾಯ್ಡು; ಎರಡು ದಿನದ ಬಳಿಕ ಪಾಕಿಸ್ತಾನದ ಕಡೆಯ ಕಾಮಗಾರಿಗೆ ಶಂಕುಸ್ಥಾಪನೆ

2019 ಅಕ್ಟೋಬರ್: ಕರ್ತಾರ್‌ಪುರಕ್ಕೆ ಯಾತ್ರಿಕರ ಭೇಟಿ ಸಂಬಂಧಡೇರಾ ಬಾಬಾ ನಾನಕ್ ಸಮೀಪದ ‘ಝೀರೋ ಪಾಯಿಂಟ್‌’ನಲ್ಲಿಪಾಕ್–ಭಾರತ ಒಪ್ಪಂದ

ಗುರುನಾನಕ್ ಅವರು ಭಾರತದ ಪ್ರಜಾಪ್ರಭುತ್ವವಾದಿ ಧರ್ಮಗುರುಗಳಲ್ಲಿ ಒಬ್ಬರು. ಅವರ ತತ್ವಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ, ಜಗತ್ತು ಶಾಂತಿ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಐದು ಶತಮಾನಗಳ ಹಿಂದಿನ ಅವರ ಬೋಧನೆಗಳು ಇಂದಿಗೂ ಪ್ರಸ್ತುತ.
-ಎಂ. ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
(ಗುರುನಾನಕ್ 550ನೇ ಜಯಂತಿ ಸ್ಮರಣಾರ್ಥ ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಹೇಳಿಕೆ)

**

ಗುರುನಾನಕ್ ಪ್ರತಿಪಾದಿಸಿದ ಧರ್ಮಿಕ ಸಹಿಷ್ಣುತೆ, ಶಾಂತಿ ಮೊದಲಾದ ತತ್ವಗಳು ಜಗತ್ತು ಎದುರಿಸುತ್ತಿರುವ ಜನಾಂಗೀಯ ಹಿಂಸಾಚಾರ ತಡೆಗೆ ಮಾರ್ಗದರ್ಶಕವಾಗಬಲ್ಲವು. ಪಂಜಾಬ್ ಗುರುನಾನಕ್ ಅವರ ಕರ್ಮಭೂಮಿ. 550ನೇ ಜಯಂತಿಯ ಈ ಸಮಯದಲ್ಲಿ ಅವರ ಪರಂಪರೆಯನ್ನು ಉಳಿಸಿಕೊಳ್ಳುವ ಸವಾಲು ನಮ್ಮೆದುರಿಗೆ ಇದೆ
-ಡಾ. ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.