ಗುರುಗ್ರಾಮ: ಗುರುಗ್ರಾಮದ ಗ್ರಾಮವೊಂದರಲ್ಲಿ ಸೋಮವಾರ ಮುಂಜಾನೆ ಅಪರಿಚಿತ ವ್ಯಕ್ತಿಗಳ ಗುಂಪು ದರ್ಗಾಕ್ಕೆ ಬೆಂಕಿ ಹಚ್ಚಿದೆ.
ಸ್ಥಳೀಯ ಜನರು ಬೆಂಕಿ ನಿಯಂತ್ರಣಕ್ಕೆ ತರುವ ಮೊದಲು ಕೆಲವು ಪ್ರಾರ್ಥನಾ ಸಾಮಗ್ರಿಗಳು ಸುಟ್ಟುಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನೂಹ್ ಜಿಲ್ಲೆಯಲ್ಲಿ ಪ್ರಾರಂಭವಾದ ಕೋಮು ಗಲಭೆ ಹತ್ತಿರದ ಪ್ರದೇಶಗಳಿಗೆ ಹರಡಿದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಇನ್ನೂ ಗುರುಗ್ರಾಮದಲ್ಲಿ ಜಾರಿಯಲ್ಲಿರುವಾಗ ಈ ಘಟನೆ ನಡೆದಿದೆ. ಗುರುಗ್ರಾಮ ಜಿಲ್ಲಾಡಳಿತ ಸೋಮವಾರ ಬೆಳಿಗ್ಗೆ ನಿಷೇಧಾಜ್ಞೆ ತೆರವು ಮಾಡಿದೆ.
ದರ್ಗಾ ಉಸ್ತುವಾರಿ ಘಸೀತ್ ರಾಮ್ ಸಲ್ಲಿಸಿದ ದೂರಿನ ಪ್ರಕಾರ, ‘ಭಾನುವಾರ ರಾತ್ರಿ 8:30ಕ್ಕೆ ಫಿರೋಜ್ ಗಾಂಧಿ ಕಾಲೋನಿಯಲ್ಲಿರುವ ಮನೆಗೆ ಹೊರಟಾಗ ಖಾಂಡ್ಸಾ ಗ್ರಾಮದ ದರ್ಗಾದಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಮಧ್ಯರಾತ್ರಿ 1.30ರ ಸುಮಾರಿಗೆ ಮಂದಿರ ಸಮೀಪ ವಾಸವಿರುವ ವ್ಯಕ್ತಿಯೊಬ್ಬರು ಕರೆ ಮಾಡಿ, ಕೆಲವರು ದರ್ಗಾಕ್ಕೆ ಬೆಂಕಿ ಹಚ್ಚಿದ್ದಾರೆ ಎಂದರು. ಜನರ ನೆರವಿನಿಂದ ಬೆಂಕಿ ಹತೋಟಿಗೆ ತರಲಾಯಿತು’ ಎಂದು ತಿಳಿಸಿದ್ದಾರೆ.
‘ನಾನು ಸ್ಥಳಕ್ಕೆ ಹೋದಾಗ ದರ್ಗಾ ಒಳಗೆ ಸಾಮಗ್ರಿಗಳು ಸುಟ್ಟು ಹಾಕಲಾಗಿತ್ತು. 5-6 ಯುವಕರ ಗುಂಪು ಬೆಂಕಿ ಹಚ್ಚಿರಬಹುದು. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.
ಮಾರುಕಟ್ಟೆಯ ಮಧ್ಯದಲ್ಲಿರುವ ದಶಕಗಳಷ್ಟು ಹಳೆಯ ಪೀರ್ ಬಾಬಾ ಸಮಾಧಿ ಜೊತೆಗೆ ಗೋಡೆಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಸಹ ಹೊಂದಿದೆ. ಹೊರ ಗೋಡೆ ಮೇಲೂ ಹಿಂದೂ ದೇವತೆಯ ಚಿತ್ರ , ಓಂ ಹಾಗೂ ಸ್ವಸ್ತಿಕ್ ಚಿಹ್ನೆಗಳಿವೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.