ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಿದ್ಧಪಡಿಸಿರುವ ವರದಿಯು, ಈ ಮಸೀದಿಯನ್ನು ಅದಾಗಲೇ ಇದ್ದ ದೇವಸ್ಥಾನದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂಬುದಾಗಿ ಸೂಚಿಸುತ್ತಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಗುರುವಾರ ಹೇಳಿದ್ದಾರೆ.
839 ಪುಟಗಳ ಸಮೀಕ್ಷಾ ವರದಿಯ ಪ್ರತಿಯು ಪ್ರಕರಣದ ಸಂಬಂಧಪಟ್ಟವರಿಗೆ ಕೋರ್ಟ್‌ನಿಂದ ಲಭ್ಯವಾಗಿದೆ ಎಂದು ಜೈನ್ ಹೇಳಿದ್ದಾರೆ. ಅದಾಗಲೇ ಇದ್ದ ದೇವಸ್ಥಾನವನ್ನು ಧ್ವಂಸಗೊಳಿಸಿ, ಅದರ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದನ್ನು ಸಮೀಕ್ಷಾ ವರದಿಯು ಸ್ಪಷ್ಟಪಡಿಸುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇವಸ್ಥಾನದ ಅಸ್ತಿತ್ವದ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಸಮೀಕ್ಷಾ ವರದಿಯಲ್ಲಿ ಇವೆ ಎಂದು ಅವರು ಹೇಳಿದ್ದಾರೆ. ಹಿಂದೂ ಹಾಗೂ ಮುಸ್ಲಿಂ ಅರ್ಜಿದಾರರು ಸೇರಿದಂತೆ ಒಟ್ಟು 11 ಮಂದಿ ಈ ಸಮೀಕ್ಷೆಯ ವರದಿಯ ಪ್ರತಿ ತಮಗೆ ಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.